ನನಗೆ ಕ್ಯಾನ್ಸರ್​ ಇರುವುದು ಗೊತ್ತಾಗಿದ್ದೇ ಅಪರಿಚಿತ ವೀಕ್ಷಕಿಯ ಇ-ಮೇಲ್​ನಿಂದ; ಟಿವಿ ರಿಪೋರ್ಟರ್​ ಹೇಳಿದ ಅಚ್ಚರಿಯ ಸಂಗತಿ

TV Reporter
Published on

ಫ್ಲೋರಿಡಾದ ಟಿವಿ ಜರ್ನಲಿಸ್ಟ್​ಗೆ ಒಂದು ದಿನ ವೀಕ್ಷಕರೊಬ್ಬರಿಂದ ಒಂದು ಮೇಲ್​ ಬರುತ್ತದೆ. ಆಕೆ ಚಾನಲ್​ವೊಂದರ ಪ್ರಮುಖ ವರದಿಗಾರ್ತಿಯಾಗಿದ್ದರಿಂದ ವಾಕ್​ ಥ್ರೂ ಮಾಡುವಾಗ ಟಿವಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹೀಗೆ ಒಂದು ದಿನ ಟಿವಿಯಲ್ಲಿ ಕಾಣಿಸಿಕೊಂಡ ಅವರಿಗೆ, ಪ್ರತಿದಿನ ಚಾನಲ್ ನೋಡುತ್ತಿದ್ದ ವೀಕ್ಷಕಿ ಇ-ಮೇಲ್​ ಕಳಿಸಿ ಒಂದು ವಿಚಾರವನ್ನು ಹೇಳುತ್ತಾರೆ. ಇದೀಗ ಆ ಪತ್ರಕರ್ತೆ ಮೇಲ್​ ಮಾಡಿದ ವೀಕ್ಷಕಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಿದ್ದಾಳೆ.

ಡಬ್ಲ್ಯೂಎಫ್​ಎಲ್​ಎ ನ್ಯೂಸ್​ ಎಂಬ ಸುದ್ದಿ ಮಾಧ್ಯಮದ ತನಿಖಾ ವರದಿಗಾರ್ತಿಯಾದ ವಿಕ್ಟೋರಿಯಾ ಪ್ರೈಸ್​ ಟ್ವೀಟ್​ ಮಾಡುವ ಮೂಲಕ ಈ ವಿಚಾರ ತಿಳಿಸಿದ್ದಾರೆ. ನನ್ನ ಕಾರ್ಯಕ್ರಮದ ಮಹಿಳಾ ವೀಕ್ಷಕರೋರ್ವರು ಮೇಲ್​ ಮಾಡಿ, ಮೇಡಂ...ನಾನೀಗಷ್ಟೇ ನಿಮ್ಮ ವರದಿಯನ್ನು ನೋಡಿದೆ. ನಿಮ್ಮ ಕುತ್ತಿಗೆಯ ಭಾಗ ಉಬ್ಬಿದೆ. ಅಲ್ಲೇನೋ ಗಡ್ಡೆಯಾದಂತೆ ಕಾಣಿಸುತ್ತಿದೆ. ನನಗೂ ಹಾಗೇ ಆಗಿತ್ತು. ಮೊದಲು ಟೆಸ್ಟ್​ ಮಾಡಿಸದೆ ನಂತರ ಅದು ಕ್ಯಾನ್ಸರ್​ಗೆ ತಿರುಗಿತ್ತು. ದಯವಿಟ್ಟು ನೀವು ಒಮ್ಮೆ ವೈದ್ಯರ ಬಳಿ ಹೋಗಿ. ಥೈರಾಯಿಡ್​ ಟೆಸ್ಟ್​ ಮಾಡಿಸಿ. ಟೇಕ್​ ಕೇರ್​ ಎಂದು ಬರೆದಿದ್ದರು.

ನಂತರ ನಾನೂ ಹೋಗಿ ಟೆಸ್ಟ್​ ಮಾಡಿಸಿದೆ. ಇದೀಗ ನನಗೂ ಕ್ಯಾನ್ಸರ್​ ಇರುವುದು ದೃಢಪಟ್ಟಿದೆ ಎಂದು ಟ್ವೀಟ್​ ಮಾಡಿದ್ದಾರೆ.

ನನಗೆ ಶೀಘ್ರದಲ್ಲೇ ಸರ್ಜರಿ ಆಗಲಿದೆ. ಸದ್ಯದ ಮಟ್ಟಿಗೆ ಸುರಕ್ಷಿತವಾಗಿದ್ದೇನೆ. ಕ್ಯಾನ್ಸರ್​ ಒಳಗೆ ಹರಡುತ್ತಿದ್ದರೂ ಅದು ತೀವ್ರಗತಿಯಲ್ಲಿ ಇಲ್ಲ. ಸರ್ಜರಿ ಮಾಡಿ ಗಡ್ಡೆ ತೆಗೆದರೆ ಸಾಕು...ಸದ್ಯಕ್ಕೆ ಕಿಮೋ ಚಿಕಿತ್ಸೆ ಬೇಡ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವಿಕ್ಟೋರಿಯಾ ಪ್ರೈಸ್​ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಶಂಕೆ ಕಾಂಗ್ರೆಸ್‍ಗೆ: ಮಣಿಪುರದ ಇಬ್ಬರು ಶಾಸಕರಿಗೆ ಶೋಕಾಸ್ ನೋಟಿಸ್!  

ನನ್ನ ಕುತ್ತಿಗೆಯ ಮೇಲೆ ಇರುವ ಉಬ್ಬು ಅಷ್ಟು ಬೇಗ ಕಾಣಿಸುವಂಥದ್ದಲ್ಲ. ಅದನ್ನು ಸೂಕ್ಷ್ಮವಾಗಿ ಗಮನಿಸದರಷ್ಟೇ ಗೊತ್ತಾಗುತ್ತದೆ. ಅಂಥದ್ದರಲ್ಲಿ ಆ ಮಹಿಳೆ ಅದನ್ನು ನೋಡಿ, ಸುಮ್ಮನಾಗದೆ ಮೇಲ್​ ಕೂಡ ಮಾಡಿದ್ದಾರೆ. ಕರೊನಾ ಸಾಂಕ್ರಾಮಿಕ ಶುರುವಾದ ಮೇಲೆ ವಿಪರೀತ ಕೆಲಸ. ಆರೋಗ್ಯದ ಬಗ್ಗೆ ಲಕ್ಷ್ಯವೇ ಇಲ್ಲದಂತಾಗಿತ್ತು. ಇದೀಗ ಮಹಿಳೆ ನನ್ನನ್ನು ಎಚ್ಚರಿಸದೆ ಇದ್ದರೆ ಅದಿನ್ನೆಷ್ಟು ದಿನ ಹೀಗೆ ಇರುತ್ತಿದ್ದೆನೋ ಗೊತ್ತಿಲ್ಲ. ಬಹುಶ್ಯಃ ನನ್ನ ಜೀವಕ್ಕೆ ಅಪಾಯ ಬರುತ್ತಿತ್ತು ಎಂದಿದ್ದಾರೆ.

ನಾನಂತೂ ಆ ಮಹಿಳೆಗೆ ಯಾವಾಗಲೂ ಋಣಿಯಾಗಿರುತ್ತೇನೆ. ಅವರು ಅಪರಿಚಿತರು..ನನಗೇನು ಎಂದು ಬಿಟ್ಟುಬಿಡಬಹುದಿತ್ತು. ಆದರೆ ಇ-ಮೇಲ್​ ಮಾಡಿ ನನ್ನ ಪ್ರಾಣ ಉಳಿಸಿದರು ಎಂದು ವಿಕ್ಟೋರಿಯಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೀಗ ಚಿಕಿತ್ಸೆ ಪಡೆಯಲು ಸಿದ್ಧರಾಗುತ್ತಿದ್ದಾರೆ.

ಇನ್ನು ವಿಕ್ಟೋರಿಯಾ ಅವರ ಟ್ವೀಟ್​ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕ್ಯಾನ್ಸರ್​ ಗೆದ್ದ ಹಲವರು ಆಕೆಗೆ ಧೈರ್ಯ ತುಂಬಿದ್ದಾರೆ. ಇ-ಮೇಲ್​ ಮಾಡಿ ಎಚ್ಚರಿಸಿದ ಮಹಿಳೆಯನ್ನೂ ಹೊಗಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net