

ಬಾಲಿವುಡ್ ನಿರ್ದೇಶಕ ರಾಜ್ಕುಮಾರ್ ಸಂತೋಷಿ ನಿರ್ದೇಶಿಸಿರುವ ಚಿತ್ರ ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’. ಚಿತ್ರದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ನಾಥೂರಾಮ್ ಗೋಡ್ಸೆ ನಡುವಿನ ಸೈದ್ಧಾಂತಿಕ ಸಂಘರ್ಷದ ಮೇಲೆ ಬೆಳಕು ಚೆಲ್ಲಲಾಗಿದೆ. ಈಗಾಗಲೇ ಟೀಸರ್ ಮತ್ತು ಟ್ರೇಲರ್ ಬಿಡುಗಡೆಯಾಗಿದ್ದು, ಕುತೂಹಲ ಹೆಚ್ಚಿಸಿವೆ. ಅದರ ನಡುವೆಯೇ ಗಾಂಧೀಜಿ ಮರಿ ಮೊಮ್ಮಗ ತುಷಾರ್ ಗಾಂಧಿ, ಚಿತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅವರಿಗೆ ಗೋಡ್ಸೆ ಅಂದರೆ ಹೀರೋ. ಗೋಡ್ಸೆಯನ್ನು ಚಿತ್ರದಲ್ಲಿ ನಾಯಕನಂತೆ ತೋರಿಸಿದ್ದರೂ ಆಶ್ಚರ್ಯಪಡುವಂಥದ್ದೇನಿಲ್ಲ. ಚಿತ್ರದ ಅರ್ಹತೆ ಅಥವಾ ನ್ಯೂನತೆಗಳ ಬಗ್ಗೆ ಈಗಲೇ ಏನೂ ಹೇಳಲಾಗುವುದಿಲ್ಲ. ಏಕೆಂದರೆ ನಾನು ಆ ಸಿನಿಮಾ ನೋಡಿಲ್ಲ. ಕೊಲೆಗಾರರನ್ನು ವೈಭವೀಕರಿಸುವ ಚಿತ್ರ ನೋಡಲು ನನಗೂ ಇಷ್ಟವಿಲ್ಲ. ಈ ಹಿಂದೆ ಇದೇ ನಿರ್ದೇಶಕ ನಿರ್ದೇಶಿಸಿದ್ದ ‘ಭಗತ್ ಸಿಂಗ್’ ಚಿತ್ರದಲ್ಲಿ ಬಾಪು ಅವರನ್ನು ಕೆಟ್ಟದಾಗಿ ಬಿಂಬಿಸಿದ್ದರು. ಈಗ ಆತನೇ ಗೋಡ್ಸೆಯನ್ನು ವೈಭವೀಕರಿಸಿ ಸಿನಿಮಾ ಮಾಡಿರುವುದು ನನಗೆ ಆಶ್ಚರ್ಯವೇನಿಲ್ಲ’ ಎಂದು ತುಷಾರ್ ಗಾಂಧಿ ಹೇಳಿಕೊಂಡಿದ್ದಾರೆ.
ಮತ್ತೊಂದೆಡೆ ಚಿತ್ರವನ್ನು ಸಮರ್ಥನೆ ಮಾಡಿಕೊಂಡಿರುವ ರಾಜ್ಕುಮಾರ್ ಸಂತೋಷಿ, ‘ಇದು ಪ್ರಚಾರಕ್ಕಾಗಿ ಮಾಡಿದ ಚಿತ್ರವಲ್ಲ. ಗಾಂಧಿ ಮತ್ತು ಗೋಡ್ಸೆ ಇಬ್ಬರ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಮಂಡಿಸಿ, ರ್ಚಚಿಸಲು ಈ ಸಿನಿಮಾ ಒಂದು ವೇದಿಕೆಯಷ್ಟೇ’ ಎಂದಿದ್ದಾರೆ. ಮಹಾತ್ಮಾ ಗಾಂಧಿ ಪಾತ್ರದಲ್ಲಿ ದೀಪಕ್ ಅಂಟಾನಿ ಹಾಗೂ ನಾಥೂರಾಮ್ ಗೋಡ್ಸೆ ಪಾತ್ರದಲ್ಲಿ ಚಿನ್ಮಯ್ ಮಂಡ್ಲೇಕರ್ ನಟಿಸಿದ್ದು, ‘ಗಾಂಧಿ ಗೋಡ್ಸೆ : ಏಕ್ ಯುದ್ಧ್’ ಇದೇ 26ರಂದು ರಿಲೀಸ್ ಆಗಲಿದೆ. -ಏಜೆನ್ಸೀಸ್