

ಲಖನೌ: ಕಾರು ಹರಿದು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಳಿವಿನಂಚಿನಲ್ಲಿರುವ ಮೂಕ ಜೀವಿ ಆಮೆಗೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ) ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರುಜೀವ ನೀಡಿದೆ.
ಕಾರು ಹರಿದು ಛಿದ್ರ ಛಿದ್ರಗೊಂಡಿದ್ದ ಆಮೆಯ ಹೊದಿಕೆ ಅಥವಾ ಚಿಪ್ ಅನ್ನು ಸೂಪರ್‌ಗ್ಲೂ ಮತ್ತು ಬ್ಲೌಸ್ ಕ್ಲಾಸ್ಪ್ ಬಳಸಿ ಮರುಜೋಡಿಸುವ ಮೂಲಕ ಆಮೆಗೆ ಮತ್ತೆ ಜೀವನ ನೀಡಲಾಗಿದೆ. ಮೂಳೆ ಶಸ್ತ್ರಚಿಕಿತ್ಸಕರು ಬಳಸುವ ಅಂಟು ಲಭ್ಯವಿಲ್ಲದ ಕಾರಣ ಮತ್ತು ಆಮೆಗೆ ಸಮಯ ಮೀರಿದ್ದರಿಂದ, ಚಿಪ್ನಲ್ಲಿ ಉಂಟಾಗಿದ್ದ ಬಹು ಬಿರುಕುಗಳನ್ನು ಸರಿಪಡಿಸಲು ಸೂಪರ್‌ಗ್ಲೂ ಅನ್ನು ಪರ್ಯಾಯವಾಗಿ ಬಳಸಲಾಯಿತು.
ಡಾ ಅಭಿಜೀತ್ ಪಾವ್ಡೆ ಮತ್ತು ಡಾ ಕಮಲೇಶ್ ಕುಮಾರ್ ಮತ್ತು ಉನ್ನತ ಪಶುವೈದ್ಯಕೀಯ ಸಂಸ್ಥೆಯ ತಂಡದ ಇತರ ಸದಸ್ಯರು ಈ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿದರು. ಸದ್ಯ ಆಮೆಯನ್ನು ಬುಡೌನ್‌ನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ನಿಗಾದಲ್ಲಿ ಇರಿಸಲಾಗಿದ್ದು, ಅದರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಅಂದಹಾಗೆ ಭಾರತೀಯ ಫ್ಲಾಪ್‌ಶೆಲ್ ಆಮೆಯನ್ನು ಐಯುಸಿಎನ್ (ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್) ವನ್ಯಜೀವಿ ಜಾತಿಗಳ ಕೆಂಪು ಪಟ್ಟಿಯಲ್ಲಿ ಅಳಿವಿನಂಚಿನಲ್ಲಿರುವ ಜೀವಿ ಎಂದು ಪಟ್ಟಿಮಾಡಿದೆ. ಅಪಘಾತಕ್ಕೊಳಗಾದ ಆಮೆ ಹೆಣ್ಣು ಆಮೆಯಾಗಿದ್ದು, ಅದರ ಹೊಟ್ಟೆಯೊಳಗೆ 7 ಮೊಟ್ಟೆಗಳಿದ್ದವು. ಹೀಗಾಗಿ ತಕ್ಷಣ ಆಪರೇಷನ್ ಮಾಡಿ ಜೀವ ಉಳಿಸಲಾಗಿದೆ. (ಏಜೆನ್ಸೀಸ್)