ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಿ:ಗೆಹಲೋತ್

governor
ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಯೋಜಿಸಿದ್ದ 34ನೇ ಘಟಿಕೋತ್ಸವದಲ್ಲಿ ವಿವಿಯ ಕುಲಾಧಿಪತಿ ಥಾವರಚಂದ್ ಗೆಹಲೋತ್ ಅವರು ಪದವಿ ಪ್ರದಾನ ಮಾಡಿದರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಹೈದರಾಬಾದ್ ವಿವಿಧ ವಿಶ್ರಾಂತ ಕುಲಪತಿ ಪ್ರೊ. ರಾಮ್ ರಾಮಸ್ವಾಮಿ ಮುಂತಾದವರಿದ್ದರು.
Published on

ಶಿವಮೊಗ್ಗ: ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಆದರೆ ಇದನ್ನು ಅವಕಾಶವಾಗಿ ಪರಿವರ್ತಿಸಿಕೊಂಡು ಯಶಸ್ಸು ಕಂಡುಕೊಳ್ಳಿ ಎಂದು ಕುವೆಂಪು ವಿವಿ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಲಹೆ ನೀಡಿದರು.

ಬುಧವಾರ ಏರ್ಪಡಿಸಿದ್ದ ಕುವೆಂಪು ವಿವಿಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ನಿರಂತರ ಕಲಿಕೆ ಅವಶ್ಯ. ಜತಗೆ ಮಾನವೀಯ ಗುಣಗಳನ್ನೂ ಬೆಳೆಸಿಕೊಳ್ಳಬೇಕು. ಜೀವನ ಸಾರ್ಥಕವಾಗಲು ಎಲ್ಲರಿಗೂ ಕಲಿಕೆ ಮುಖ್ಯ. ವಿದ್ಯೆ ಕೇವಲ ಜ್ಞಾನ ಮಾರ್ಗದ ಸಾಧನವಲ್ಲ. ಅದು ವೈಯಕ್ತಿಕ ವಿಕಾಸಕ್ಕೆ ಪ್ರೇರಣೆ ನೀಡುವ ಮಾಧ್ಯಮವಾಗಬೇಕು ಎಂದು ಅಭಿಪ್ರಾಯಪಟ್ಟರು.

ಇಂದು ಭಾರತ ವಿಶ್ವದ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ದೇಶವನ್ನು ಮೂರನೇ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ವಿಕಸಿತ ಭಾರತದ ಆಶಯ ಈಡೇರಲು ಪದವೀಧರರು ತಮ್ಮದೇ ಆದ ಕೊಡುಗೆ ನೀಡಬೇಕು. ಸಾಮಾನ್ಯ ಜನರೂ ದೇಶಕ್ಕೆ ಏನಾದರೂ ನೀಡುವ ಅವಕಾಶ ಹಾಗೂ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಪದವಿ ಪಡೆದವರು ಕೇವಲ ವೈಯಕ್ತಿಕ ಜೀವನ, ಭವಿಷ್ಯದ ಬಗ್ಗೆ ಚಿಂತಿಸಬಾರದು. ಮನುಕುಲಕ್ಕೆ ಬೇಕಾದ ಸಂಗತಿಗಳನ್ನು ಚಿಂತಿಸಿ ಅದನ್ನು ನೀಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಿಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಶ್ರಮ ಹಾಗೂ ಕರ್ಮದ ಹಾದಿಯಲ್ಲಿ ಪಯಣಿಸಿ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net