ತುಂಗಭದ್ರಾ ನೀರು ಕಲುಷಿತ ಸಮೀಕ್ಷೆಯಲ್ಲೂ ದೃಢ

tunga
ಶಿವಮೊಗ್ಗದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದಿಂದ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಯಿತು. ಪ್ರೊ. ಬಿ.ಎಂ.ಕುಮಾರಸ್ವಾಮಿ, ಪ್ರೊ. ಕೆ.ಎಲ್.ಶ್ರೀಪತಿ, ತ್ಯಾಗರಾಜ ಮಿತ್ಯಾಂತ, ಗಿರೀಶ್ ಪಟೇಲ್, ಎಂ.ಶಂಕರ್, ಬಾಲಕೃಷ್ಣ ನಾಯ್ಡು, ರಮೇಶ್ ಹೆಗ್ಡೆ ಇತರರಿದ್ದರು.
Published on

ಶಿವಮೊಗ್ಗ: ಕಳೆದ ವರ್ಷಾಂತ್ಯದಲ್ಲಿ ಪರ್ಯಾವರಣ ಟ್ರಸ್ಟ್ ಶಿವಮೊಗ್ಗ, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಸಹಯೋಗದಲ್ಲಿ ನಡೆಸಿದ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆ ಸಂದರ್ಭದಲ್ಲಿ ಕಂಡುಬಂದ ಆಘಾತಕಾರಿ ಅಂಶಗಳನ್ನು ಸಮೀಕ್ಷಾ ವರದಿಯಲ್ಲಿ ದಾಖಲಿಸಲಾಗಿದೆ.

ಎರಡು ಹಂತಗಳಲ್ಲಿ 430 ಕಿ.ಮೀ ಸಾಗಿದ ಪಾದಯಾತ್ರೆ ವೇಳೆ ತುಂಗಾ ಹಾಗೂ ಭದ್ರಾ ನದಿಗಳ ಸ್ಥಿತಿಗತಿ, ಈ ಜೀವನದಿಗಳ ಮೇಲೆ ಉಂಟಾಗುತ್ತಿರುವ ಪ್ರಹಾರವನ್ನು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಾದಯಾತ್ರೆ ವೇಳೆ ಸ್ಥಳೀಯರೊಂದಿಗೆ ನಡೆಸಿದ ಸಂವಾದಗಳು, ನದಿ ಪಾತ್ರದಲ್ಲಿ ಕಂಡುಬಂದ ಸಂಗತಿಗಳನ್ನು ಆಧರಿಸಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ.

ತುಂಗಭದ್ರಾ ನದಿಯುದ್ದಕ್ಕೂ ಎಲ್ಲಿಯೂ ಚರಂಡಿ ನೀರನ್ನು ಶುದ್ಧೀಕರಣಗೊಳಿಸುವ ವ್ಯವಸ್ಥೆ ಇಲ್ಲದಿರುವುದೇ ಈ ನದಿಗಳ ಇಂದಿನ ದುರಂತಕ್ಕೆ ಕಾರಣ ಎಂಬ ಅಂಶವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ತುಂಗಭದ್ರಾ ನದಿ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜೀವನದಿ. ಈ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಹೇರಳವಾಗಿ ಕಂಡು ಬಂದಿರುವುದಕ್ಕೆ ಸಮೀಕ್ಷಾ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇಂದಿನ ಸ್ಥಿತಿಯಲ್ಲಿ ತುಂಗ-ಭದ್ರಾ ನದಿಗಳ ನೀರು ಹೆಚ್ಚು ಕಲ್ಮಶವಾಗಿದೆ. ನದಿಗಳ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಅರಣ್ಯ ನಾಶವಾಗಿರುವುದರಿಂದ ಮಣ್ಣು ನದಿಗೆ ಸೇರುತ್ತಿದೆ. ಇದರಿಂದ ನೀರಿನಲ್ಲಿ ಅಲ್ಯುಮಿನಿಯಂ ಅಂಶ ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಾದಯಾತ್ರೆ ಸಂದರ್ಭದಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿದ ಸಮೀಕ್ಷಾ ವರದಿಯನ್ನು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪರಿಸರ ತಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ವಿಜ್ಞಾನಿ ಡಾ. ಎಲ್.ಕೆ.ಶ್ರೀಪತಿ, ಪರ್ಯಾವರಣ ಟ್ರಸ್ಟ್‌ನ ಪ್ರಮುಖರಾದ ಗಿರೀಶ್ ಪಟೇಲ್, ಎಂ.ಶಂಕರ್, ರಮೇಶ್ ಹೆಗ್ಡೆ, ಬಾಲಕೃಷ್ಣ ನಾಯ್ಡು, ತ್ಯಾಗರಾಜ್ ಮಿತ್ಯಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net