ಅಪಾಯಮಟ್ಟ ಮೀರಿ ಹರಿಯುತ್ತಿದೆ ತುಂಗಭದ್ರೆ

news
ಹಂಪಿಯ ಪುರಂದರದಾಸರ ಮಂಟಪ ಗುರುವಾರ ಭಾಗಶಃ ಮುಳುಗಿರುವುದು
Published on
  • ನದಿ ಅಂಚಿನ ಐತಿಹಾಸಿಕ ಹಂಪಿ ಸ್ಮಾರಕಗಳು ಮುಳುಗಡೆ

ಹೊಸಪೇಟೆ: ತರ ಜೀವನಾಡಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ 80 ಸಾವಿರ ಕ್ಯೂಸೆಕ್‌ಗೂ ಅಧಿಕ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟ ಹಿನ್ನೆಲೆಯಲ್ಲಿ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ನದಿ ಅಂಚಿನಲ್ಲಿರುವ ಐತಿಹಾಸಿಕ ಹಂಪಿ ಸ್ಮಾರಕಗಳು ನೀರಿನಲ್ಲಿ ಮುಳಗಡೆಯಾಗಿವೆ.

ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇಗುಲದ ಹತ್ತಿರ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿತಟದ ವೈದಿಕ ಮಂಟಪ, ಜನಿವಾರ ಮಂಟಪ, ಅಡಕಲ ಗುಂಡು, ಪುರಂದರ ಮಂಟಪ, ಕೋಟಿ ಲಿಂಗ ನದಿಯಲ್ಲಿ ಮುಳಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ಹಾಗೂ ಯಂತ್ರೋದ್ಧಾರಕ ಆಂಜನೇಯ ದೇವಸ್ಥಾನಕ್ಕೆ ತೆರಳುವ ಪಾದಚಾರಿ ಮಾರ್ಗ ಸಂಪರ್ಕ ಕಡಿತವಾಗಿದ್ದು, ಪ್ರವಾಸಿಗರು, ಎದುರು ಬಸವಣ್ಣ ಮಂಟದ ಬೆಟ್ಟದ ಕಾಲುದಾರಿ ಮೂಲಕ ಕೋದಂಡರಾಮ ಹಾಗೂ ಯಂತ್ರೋದ್ಧಾರಕ ಸೇರಿದಂತೆ ಅಚ್ಯುತ ದೇವಾಲಯಗಳಿಗೆ ತೆರಳುತ್ತಿದ್ದಾರೆ. ನದಿ ಉಕ್ಕಿಹರಿಯುತ್ತಿರುವ ಹಿನ್ನೆಲೆಯಲ್ಲಿ ದೋಣಿ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

28 ಕ್ರಸ್ಟ್ ಗೇಟ್‌ನಿಂದ ನದಿಗೆ ನೀರು:

ತುಂಗಭದ್ರಾ ಜಲಾಶಯದ 28 ಗೇಟ್ ಮೂಲಕ 71,262 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. ಒಳಹರಿವಿನಲ್ಲಿ ಏರಿಕೆಯಾಗಿದ್ದರಿಂದ 20 ಗೇಟ್‌ಗಳನ್ನು ತಲಾ 2 ಅಡಿ ಹಾಗೂ ಇನ್ನೂ 8 ಗೇಟ್‌ಗಳನ್ನು ತಲಾ ಒಂದು ಅಡಿ ತೆರೆದು ನೀರು ಹರಿಸಲಾಗಿದೆ. ಇನ್ನೂ ಪವರ ಕಾಲುವೆ ಮೂಲಕವೂ ನದಿಗೆ ನೀರು ಹರಿಸಲಾಗಿದ್ದು, ಒಟ್ಟು 83,649 ಕ್ಯುಸೆಕ್ ನೀರು ನದಿಗೆ ಹೊರಬಿಡಲಾಗಿದೆ. ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗ್ಗೆ 81 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೊರಹೋಗುವ ನೀರು ಆಂಧ್ರದ ಶ್ರೀಶೆಲ ಜಲಾಶಯ ಸೇರಲಿದೆ. ಒಳಹರಿವಿನ ಪ್ರಮಾಣ ಜಾಸ್ತಿಯಾದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ನದಿ ಪತ್ರದ ಜನರಿಗೆ ಎಚ್ಚರಿಕೆ

ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 105.788 ಟಿಎಂಸಿ ಇದ್ದು, ಈಗಾಗಲೇ 102.576 ಟಿಎಂಸಿ ನೀರು ಸಂಗ್ರಹವಾಗಿದೆ. ಸದ್ಯ ಜಲಾಶಯದಲ್ಲಿ 1632.20 ಅಡಿಗಳಷ್ಟು ನೀರು ಭರ್ತಿಯಾಗಿದೆ. ತುಂಗಭದ್ರಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ವಿಜಯನಗರ, ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹಂಪಿಯಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲೂ ಪ್ರವಾಹ ಭೀತಿ ಎದುರಾಗಿದ್ದು, ನದಿ ತಟದ ಕೆಲ ಸ್ಮಾರಕಗಳು ನೀರಿನಲ್ಲಿ ಮುಳಗುಡೆಯಾಗಿವೆ. ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ನದಿ ತಟದಲ್ಲಿ ಮೊಕ್ಕಾಂ ಹೂಡಿದ್ದಾರೆ. ನದಿಯ ನೀರಿಗೆ ಪ್ರವಾಸಿಗರು ಇಳಿಯದಂತೆ ಎಚ್ಚರವಹಿಸಿದ್ದಾರೆ.

1.50 ಲಕ್ಷ ಕ್ಯೂಸೆಕ್ ಗೆ ಏರುವ ಸಾಧ್ಯತೆ

ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ತುಂಗಾ ನದಿ ಮತ್ತು ವರದಾ ನದಿಯಲ್ಲಿ ಹರಿಯುತ್ತಿರುವ ನೀರಿನ ಪರಿಗಣಿಸಿದರೆ, ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಒಳಹರಿವಿನ ಆಧಾರದ ಮೇಲೆ ಯಾವುದೇ ಸಮಯದಲ್ಲಿ ಆದ್ದರಿಂದ ಹೊರಹರಿವು 1ಲಕ್ಷ ಕ್ಯೂಸೆಕ್‌ಗಳಿಂದ 1.50 ಲಕ್ಷ ಕ್ಯೂಸೆಕ್‌ಗಳ ವರೆಗೆ ಹರಿಸ ಬಹುದು. ಆದ್ದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು ಎಂದು ಟಿಬಿಬಿ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net