ನ.4ರಿಂದ ತುಂಗಭದ್ರಾ ಜಲಜಾಗೃತಿ ಅಭಿಯಾನ

pro.b.m.kumaraswamy
ಅಭಿಯಾನದ ಸಂಚಾಲಕ ಪ್ರೊ. ಬಿ.ಎಂ.ಕುಮಾರಸ್ವಾಮಿ
Published on

ಶಿವಮೊಗ್ಗ: ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆ ನೆರವಿನೊಂದಿಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಗಂಗಾವತಿಯ ಕಿಷ್ಕಿಂದೆವರೆಗೆ ನ.4ರಿಂದ ನಿರ್ಮಲ ತುಂಗಭದ್ರಾ ಅಭಿಯಾನ, ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ಸಂಚಾಲಕ ಪ್ರೊ. ಬಿ.ಎಂ.ಕುಮಾರಸ್ವಾಮಿ ಹೇಳಿದರು.

ಸರ್ಕಾರ ಮತ್ತು ಸಾರ್ವಜನಿಕರ ಗಮನ ಸೆಳೆಯುವುದಕ್ಕೆ ಹಾಗೂ ಕಲುಷಿತ ತುಂಗಭದ್ರಾವನ್ನು ನಿರ್ಮಲವಾಗಿಸುವ ಸಂಕಲ್ಪದೊಂದಿಗೆ ಬೃಹತ್ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ರಾಷ್ಟ್ರೀಯ ಸಂಚಾಲಕ ಬಸವರಾಜ ಪಾಟೀಲ್ ಮಾರ್ಗದರ್ಶನದಲ್ಲಿ ಪಾದಯಾತ್ರೆ ರೂಪುರೇಷೆಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಶೃಂಗೇರಿ, ತೀರ್ಥಹಳ್ಳಿ, ಹೊನ್ನಾಳಿ, ಹರಿಹರ ಮತ್ತಿತರ ಪ್ರಮುಖ ಪಟ್ಟಣಗಳಲ್ಲಿ ಒಂದು ಸುತ್ತಿನ ಸಭೆ ನಡೆಸಿ ಸ್ಥಳೀಯ ತಂಡಗಳ ಜೋಡಣೆ ಕಾರ್ಯವಾಗುತ್ತಿದೆ. ಪಾದಯಾತ್ರೆಯಲ್ಲಿ ಎಲ್ಲ ಸ್ತರದ ಜನರು, ಸಂಘ-ಸಂಸ್ಥೆಗಳು, ಪರಿಸರಾಸಕ್ತರು, ತುಂಗಭದ್ರಾ ನೀರು ಬಳಕೆದಾರರು ಭಾಗಿಯಾಗಬೇಕು ಎಂಬುದು ನಮ್ಮ ಅಪೇಕ್ಷೆ ಎಂದರು.
ಈಗಾಗಲೇ ಹಲವೆಡೆ ಶಾಲಾ ಕಾಲೇಜು, ಮಠ ಮಂದಿರ, ಸ್ಥಳೀಯ ಆಡಳಿತ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರನ್ನು ಭೇಟಿ ಮಾಡಲಾಗಿದೆ. ಶೃಂಗೇರಿ, ಹರಿಹರಪುರ, ಬಾಳಗಾರು, ಕೂಡಲಿ, ಶಿವಮೊಗ್ಗ, ಹೊನ್ನಾಳಿ, ಹರಿಹರದ ವಿವಿಧ ಮಠಾಧೀಶರು ಪಾದಯಾತ್ರೆಗೆ ಬೆಂಬಲಿಸುವರು ಎಂದು ಹೇಳಿದರು.
ಗೌರಿಗದ್ದೆಯ ಶ್ರೀ ವಿನಯ್ ಗುರೂಜಿ ಅವರು ಪರಿಸರ ಕಾಳಜಿ ಕೆಲಸದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಆಶ್ರಮದ 200ಕ್ಕೂ ಅಧಿಕ ಪರಿಸರಾಸಕ್ತರು ಮತ್ತು ಹೊನ್ನಾಳಿ ಶ್ರೀ ರಾಘವೇಂದ್ರಮಠ, ಹಿರೇಕಲ್ ಮಠದ ಶ್ರೀಗಳು, ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುವರು ಎಂದರು.
ಪ್ರಮುಖರಾದ ಎಂ.ಶಂಕರ್, ಗಿರೀಶ್ ಪಟೇಲ್, ಎಸ್.ಬಿ.ಅಶೋಕಕುಮಾರ್, ತ್ಯಾಗರಾಜ್ ಮಿಥ್ಯಾಂತ, ಬಾಲು ಮಹೇಂದರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net