

ರಾಣೆಬೆನ್ನೂರ: ಉತ್ತರ ಭಾರತದ ಗಂಗಾ ನದಿಯಲ್ಲಿ ನಡೆಯುವ ಗಂಗಾರತಿಯಂತೆಯೇ, ತುಂಗಭದ್ರ ಆರತಿ ಎಂಬ ಐತಿಹಾಸಿಕ ಸಂಪ್ರದಾಯ ಪುಣ್ಯಕೋಟಿ ಮಠದಿಂದ ಜೀವ ಪಡೆದುಕೊಳ್ಳುತ್ತಿದೆ. ತುಂಗಭದ್ರ ಆರತಿಯು ಜಾತಿ ಭೇದ, ಭಾವ ಅಳಿಸಿ ಸಾಮರಸ್ಯದ ಸಂಕೇತವಾಗಿದೆ ಎಂದು ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಐತಿಹಾಸಿಕ ತುಂಗಭದ್ರ ಆರತಿ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಹರಿಯುವ ಜೀವನದಿ ತುಂಗಭದ್ರಾ ಉತ್ಸವ ಕಳೆದ ಆರು ವರ್ಷಗಳಿಂದ ನಡೆಯುತ್ತದೆ. ಭಾರತೀಯ ಸಂಸತಿಯಲ್ಲಿ ನದಿಗಳಿಗೆ ಪೂಜನೀಯ ಸ್ಥಾನವಿದೆ. ಈ ಕಾರಣಕ್ಕಾಗಿಯೇ ಪುಣ್ಯಕ್ಷೇತ್ರಗಳಿಗೆ ತೆರಳಿದಾಗ ನದಿಯಲ್ಲಿ ಸ್ನಾನ ಮಾಡಿ ಪಾಪಗಳನ್ನು ತೊಳೆದುಕೊಳ್ಳಬೇಕು ಎಂಬ ನಂಬಿಕೆ ಭಾರತೀಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ನದಿಯ ಮಹತ್ವವನ್ನೇ ಸಾರುವ ಗಂಗಾಸ್ನಾನ, ತುಂಗಾಪಾನ ಎಂಬ ಮಾತು ಇಂದಿಗೂ ಜನಪ್ರಿಯವಾಗಿದೆ ಎಂದರು.
ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ಗ್ರಾಸಿಂ ಬಿರ್ಲಾ ಕಂಪನಿ ಅಧ್ಯಕ್ಷ ಸೌಮ್ಯಕಾಂತ ಮೊಹಂತಿ, ಮೈಸೂರು ಮುಕ್ತ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಎಚ್. ವಿಶ್ವನಾಥ, ಕೆ.ಎನ್. ಪಾಟೀಲ, ನಳಿನಿ ಪ್ರವಿಣಕುಮಾರ, ರವೀಂದ್ರಗೌಡ ಪಾಟೀಲ, ಶಂಕರ ಗಡ್ಡದ, ನಿಂಗರಾಜ ಕೋಡಿಹಳ್ಳಿ, ಸಿದ್ದು ಚಿಕ್ಕಬಿದರಿ ಮತ್ತಿತರರು ಉಪಸ್ಥಿತರಿದ್ದರು.
ಗಮನ ಸೆಳೆದ ತುಂಗಾರತಿ...
ಉತ್ತರ ಭಾರತದ ಗಂಗಾ ನದಿಗೆ ನಿತ್ಯವೂ ನಡೆಯುವ ಗಂಗಾರತಿ ಮಾದರಿಯಲ್ಲೇ ತುಂಗಭದ್ರಾ ನದಿಗೂ ತುಂಗಾರತಿ ಮಾಡಿರುವುದು ಗಮನ ಸೆಳೆಯಿತು. ಗಂಗಾರತಿಗೆ ಸಿದ್ಧಪಡಿಸುವ ವೇದಿಕೆಯಂತೆ ಇಲ್ಲಿಯೂ ವೇದಿಕೆ ಸಿದ್ಧಪಡಿಸಲಾಗಿತ್ತು. ತುಂಗಾರತಿ ನೋಡಲು ಸುತ್ತಲಿನ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಜಮಾಗೊಂಡಿದ್ದರು.