

ತುಮಕೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕದ ಮೇಲೆ ವಿಶೇಷ ಕಾಳಜಿ ವಹಿಸಿರುವ ಪ್ರಧಾನಿ ಮೋದಿ ಆಗಾಗ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು (ಫೆ.6) ಕಲ್ಪತರು ನಾಡು ತುಮಕೂರಿಗೆ ಮೋದಿ ಆಗಮಿಸಲಿದ್ದಾರೆ.
ತುಮಕೂರಿನಲ್ಲಿ ಎಚ್ಎಎಲ್ ತಯಾರಿಕಾ ಘಟಕ ಉದ್ಘಾಟನೆ ಹಾಗೂ ಜಲಜೀವನ್ ಮಿಷನ್ ಯೋಜನೆಗೆ ಪ್ರಧಾನಿ ಮೋದಿ ಇಂದು ಚಾಲನೆ ನೀಡಲಿದ್ದಾರೆ. ನೂತನ ಎಚ್ಎಎಲ್ ತಯಾರಿಕಾ ಘಟಕ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ನಿರ್ಮಾಣವಾಗಿದೆ.
ಸುಮಾರು 6400 ಕೋಟಿ ವೆಚ್ಚದಲ್ಲಿ 615 ಎಕರೆ ವಿಸ್ತೀರ್ಣದಲ್ಲಿ ಎಚ್ಎಎಲ್ ಘಟಕ ನಿರ್ಮಾಣವಾಗಿದ್ದು, ಎಚ್ಎಎಲ್ ಉದ್ಘಾಟನೆ ಕಾರ್ಯಕ್ರಮದ ನೆಪದಲ್ಲಿ ಕಲ್ಪತರು ನಾಡಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಕಾರ್ಯಕ್ರಮದಲ್ಲಿ 1 ಲಕ್ಷ ಜನರನ್ನು ಸೇರಿಸಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ.
ಇಂದು ಮಧ್ಯಾಹ್ನ 3.25 ಕ್ಕೆ ಬೆಂಗಳೂರಿನಿಂದ ಗುಬ್ಬಿ ಹೆಚ್ಎಎಲ್ ಹೆಲಿಪ್ಯಾಡ್ಗೆ ಮೋದಿ ಆಗಮಿಸಲಿದ್ದಾರೆ. 3.30 ಕ್ಕೆ ಕಾರ್ಯಕ್ರಮದ ವೇದಿಕೆಗೆ ಆಗಮಿಸಲಿದ್ದು, 1 ಗಂಟೆಗಳ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 35 ನಿಮಿಷಗಳ ಕಾಲ ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ. 4.35 ಕ್ಕೆ ಕಾರ್ಯಕ್ರಮದ ವೇದಿಕೆಯಿಂದ ಎಚ್ಎಎಲ್ ಹೆಲಿಪ್ಯಾಡ್ ಕಡೆಗೆ ಮೋದಿ ಪ್ರಯಾಣ ಬೆಳೆಸಲಿದ್ದಾರೆ.
ಸಂಜೆ 4.40 ಕ್ಕೆ ಎಚ್ಎಎಲ್ ಹೆಲಿಪ್ಯಾಡ್ ತಲುಪಲಿರುವ ಮೋದಿ, 4.45 ಕ್ಕೆ ಎಚ್ಎಎಲ್ ಹೆಲಿಪ್ಯಾಡ್ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. 5.15 ಕ್ಕೆ ಬೆಂಗಳೂರು ಏರ್ಪೋರ್ಟ್ ತಲುಪಲಿದ್ದು, ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.
ಇಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ್ ಬೊಮ್ಮಾಯಿ, ಹಾಗೂ ರಾಜ್ಯದ ಹಲವು ಪ್ರಮುಖ ನಾಯಕರು ಸಾಥ್ ನೀಡಲಿದ್ದಾರೆ.
ಸಂಚಾರ ಬದಲಾವಣೆ
ನೂತನ ಹೆಚ್ಎಎಲ್ ತಯಾರಿಕಾ ಘಟಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಗುಬ್ಬಿಯಿಂದ ಕೆಬಿ ಕ್ರಾಸ್ ಹಾಗೂ ಕೆಬಿ ಕ್ರಾಸ್ನಿಂದ ಗುಬ್ಬಿ ಕಡೆಗೆ ಸಂಚರಿಸುವ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಇಂದು ಬೆಳಗ್ಗೆ 6 ರಿಂದ ಸಂಜೆ 7 ಗಂಟೆವರೆಗೆ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಗುಬ್ಬಿ, ನಿಟ್ಟೂರು ಕಡೆಯಿಂದ ಸಂಚರಿಸುವ ವಾಹನಗಳು, ನಿಟ್ಟೂರು, ಟಿಬಿ ಕ್ರಾಸ್, ತುರುವೇಕೆರೆ ಮಾರ್ಗವಾಗಿ ಕೆಬಿ ಕ್ರಾಸ್ ಕಡೆಗೆ ಸಂಚರಿಸಬೇಕು ಮತ್ತು ಕೆಬಿ ಕ್ರಾಸ್ ಕಡೆಯಿಂದ ಬರುವ ವಾಹನಗಳು ಕೆಬಿ ಕ್ರಾಸ್, ತುರುವೇಕೆರೆ, ಟಿಬಿ ಕ್ರಾಸ್ ಮಾರ್ಗವಾಗಿ ನಿಟ್ಟೂರಿಗೆ ಸಂಚರಿಸಬೇಕು. ಮಾರ್ಗ ಬದಲಾವಣೆ ಮಾಡಿ ತುಮಕೂರು ಜಿಲ್ಲಾಧಿಕಾರಿ ವೈಎಸ್ ಪಾಟೀಲ್ ಆದೇಶಿಸಿದ್ದಾರೆ.
ಕಲ್ಪತರು ನಾಡಲ್ಲಿ ಪೊಲೀಸರ ಹದ್ದಿನಕಣ್ಣು
ತುಮಕೂರಿಗೆ ಮೋದಿ ಆಗಮನ ಹಿನ್ನೆಲೆ ಗುಬ್ಬಿ ಬಳಿ ನಿರ್ಮಾಣವಾಗಿರುವ ಎಚ್ಎಎಲ್ ಆವರಣದಲ್ಲಿ . ಎಡಿಜಿಪಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಏರ್ಪಡಿಸಲಾಗಿದೆ. ಎಡಿಜಿಪಿ-1, ಐಜಿ- 1, ಎಸ್ಪಿ -7, ಡಿವೈಎಸ್ಪಿ- 20, ಪೊಲೀಸ್ ಇನ್ಸ್ಪೆಕ್ಟರ್-55, ಪೊಲೀಸ್ ಸಿಬ್ಬಂದಿ-1200, ಸಬ್ ಇನ್ಸ್ಪೆಕ್ಟರ್-150, ಹೋಮ್ ಗಾರ್ಡ್ -400, ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿ- 14, ಕೆಎಸ್ಆರ್ಪಿ ತುಕಡಿ-12 ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಬಿಗಿಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. (ದಿಗ್ವಿಜಯ ನ್ಯೂಸ್)