ತುಮಕೂರು ಸಮಾವೇಶಕ್ಕೆ ಗ್ರಾ.ಪಂ. ಹಣ ಬಳಕೆ; ತೀವ್ರ ವಿರೋಧ|Tumkur convention GP use of money; Strong opposition

KADASHETTIHALLI
Published on

ಬೆಂಗಳೂರು: ತುಮಕೂರಿನಲ್ಲಿ ಡಿಸೆಂಬರ್ 2 ರಂದು ನಡೆಯುವ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಶಂಕುಸ್ಥಾಪನೆ, ಸವಲತ್ತು ವಿತರಣಾ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯಿತಿಗಳಿಂದ ಬಸ್ ವ್ಯವಸ್ಥೆ ಮಾಡಲು ಸೂಚನೆ(Tumkur convention GP use of money; Strong opposition) ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ತುಮಕೂರು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ ಮೂರು ಬಸ್‌ಗಳಂತೆ 750 ಬಸ್ ಮೂಲಕ ಲಾನುಭವಿಗಳನ್ನು ಕರೆತರಲು ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿರುವ ನಿರ್ದೇಶನಕ್ಕೆ ಆಕ್ಷೇಪ ಕೇಳಿ ಬಂದಿವೆ.

15ನೇ ಹಣಕಾಸು ಆಯೋಗ ಮತ್ತು ರಾಜ್ಯ ಹಣಕಾಸು ಆಯೋಗದ ಅನುದಾನ ಹೊರತುಪಡಿಸಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ ಸ್ವಂತ ಸಂಪನ್ಮೂಲಗಳಿಂದ ಭರಿಸುವಂತೆ ನಿರ್ದೇಶನ ನೀಡಲಾಗಿದೆ. ಈ ನಿರ್ದೇಶನದ ರೀತಿ ಬಸ್ ವ್ಯವಸ್ಥೆ ಮಾಡಲು ಪ್ರತಿ ಗ್ರಾಮ ಪಂಚಾಯಿತಿಗೆ 50 ರಿಂದ 60 ಸಾವಿರ ರೂ. ವೆಚ್ಚ ತಗುಲಿದೆ ಎನ್ನಲಾಗಿದೆ.

ಅನೇಕ ಪಂಚಾಯಿತಿಗಳು ಸಂಪನ್ಮೂಲ ಕೊರತೆ ಎದುರಿಸುತ್ತಿದ್ದು, ಈ ವೆಚ್ಚ ಸರಿದೂಗಿಸಲು ಕಷ್ಟವಾಗಿದೆ ಎಂದು ಹೇಳಲಾಗಿದೆ.

ಗ್ರಾಪಂ ಒಕ್ಕೂಟದ ವಿರೋಧ

ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲದಿಂದ ಸಮಾವೇಶ/ ಲಾನುಭವಿಗಳನ್ನು ಕರೆತರಲು ಹಣಕಾಸು ವ್ಯವಸ್ಥೆಗೆ ಗ್ರಾಮ ಪಂಚಾಯಿತಿ ಕಾಯ್ದೆಯಲ್ಲಿ ಅವಕಾಶವಿಲ್ಲ. ಕಾಯ್ದೆ ವಿರುದ್ಧವಾಗಿ ಅಪರ ಮುಖ್ಯ ಕಾರ್ಯದರ್ಶಿ ಆದೇಶ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್(Kadashettihalli Satish) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂತಹ ನಿರ್ದೇಶನಗಳಿಂದ ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಹೊರೆಯಾಗುತ್ತದೆ. ಅಲ್ಲದೆ, ಗ್ರಾಮ ಪಂಚಾಯಿತಿಗಳ ಮೇಲೆ ರಾಜ್ಯ ಸರ್ಕಾರದ ಹಸ್ತಕ್ಷೇಪವನ್ನು ಎತ್ತಿ ತೋರುತ್ತದೆ. ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ತಕ್ಷಣ ಆದೇಶ ಹಿಂಪಡೆದು ಸಮಾವೇಶಕ್ಕೆ ರಾಜ್ಯ ಸರ್ಕಾರದ ನಿಧಿಯಿಂದಲೇ ಹಣ ಭರಿಸಬೇಕು ಎಂದು ಕಾಡಶೆಟ್ಟಿಹಳ್ಳಿ ಸತೀಶ್ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net