ತುಮಕೂರು ಬಂದ್‌ಗೆ ವ್ಯಾಪಕ ಬೆಂಬಲ: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣ

Townhall function (8)
Published on

ತುಮಕೂರು: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಶುಕ್ರವಾರ ಕರೆ ನೀಡಿದ್ದ ತುಮಕೂರು ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ಹಾಗೂ ಹೋಟೆಲ್ ಉದ್ಯಮಿಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದರು. ಸಾರಿಗೆ, ಖಾಸಗಿ ಬಸ್, ವಾಹನಗಳು, ಆಟೋಗಳ ಸಂಚಾರಕ್ಕೆ ಪ್ರತಿಭಟನಾನಿರತರು ಅಡ್ಡಿಪಡಿಸಲಿಲ್ಲ.

ಪ್ರತಿಭಟನಾ ಸಭೆ ಬಳಿಕ ಟೌನ್ ಹಾಲ್ ವೃತ್ತದಿಂದ ಮೆರವಣಿಗೆಗೆ ಅನುಮತಿ ನೀಡುವಂತೆ ಪ್ರತಿಭಟನಾನಿರತರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಹಿಂದು ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರನ್ನು ಮನವೊಲಿಸಲು ಯತ್ನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್ ಅವರನ್ನೇ ತಳ್ಳಾಡಿದರು. ಆದರೂ, ಸಹನೆ ಕಳೆದುಕೊಳ್ಳದ ಪೊಲೀಸರು, ಶಾಂತಿ ಕಾಪಾಡುವ ಹಿನ್ನೆಲೆಯಲ್ಲಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟರು.

ಟೌನ್‌ಹಾಲ್‌ನಿಂದ ಚರ್ಚ್ ಸರ್ಕಲ್‌ವರೆಗೂ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಕೆಲವು ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದ್ದಲ್ಲದೆ, ಹಲ್ಲೆ ನಡೆಸಿದವರ ವಿರುದ್ಧ ಆಕ್ರೋಶ ಹೊರಹಾಕಿದರು.

ಬಜರಂಗದಳ ದಕ್ಷಿಣ ಪ್ರಾಂತೀಯ ಸಂಯೋಜಕ ಸುನಿಲ್, ಹಿಂ.ಜಾ.ವೇ ರಾಜ್ಯ ಕಾರ್ಯದರ್ಶಿ ಉಲ್ಲಾಸ್, ವಿಎಚ್‌ಪಿ ಜಿಲ್ಲಾಧ್ಯಕ್ಷ ಜಿ.ಕೆ.ಶ್ರೀನಿವಾಸ್, ಎಂಎಲ್ಸಿ ಚಿದಾನಂದ ಎಂ ಗೌಡ, ಮಾಜಿ ಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಮೇಯರ್ ಬಿ.ಜಿ.ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಿ.ಎಸ್.ನಾಗೇಶ್, ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹೆಬ್ಬಾಕ ರವಿ, ಸಂಪಿಗೆ ಶ್ರೀಧರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್, ಉಪಾಧ್ಯಕ್ಷ ಯಶಸ್ ಸೇರಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕಸಾಯಿಖಾನೆ ಮುಚ್ಚಿಸಿ: ಮಹಾನಗರ ಪಾಲಿಕೆ ವ್ಯಾಪ್ತಿಯ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚಿಸಬೇಕು. ಬಜರಂಗದಳದ ಜಿಲ್ಲಾ ಸಂಚಾಲಯ ಮಂಜು ಭಾರ್ಗವ್‌ಗೆ ಕೊಲೆ ಬೆದರಿಕೆ ಹಾಕಿದ್ದ ಕಾರ್ಪೋರೇಟರ್ ಪತಿ ಇಸ್ಮಾಯಿಲ್ ಅವರನ್ನು ಬಂಧಿಸಬೇಕು. ಹಿಂದುಗಳನ್ನು ಮುಟ್ಟಿದರೆ ಎಲ್ಲರೂ ಒಗ್ಗಟ್ಟಾಗುತ್ತಾರೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ ಎಂದು ವಿಶ್ವ ಹಿಂದು ಪರಿಷತ್ ವಿಭಾಗೀಯ ಉಸ್ತುವಾರಿ ಬಸವರಾಜು ಗುಡುಗಿದರು.

ಹಿಂದುಪರ ಸಂಘಟನೆಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಎಲ್ಲರೂ ಭರವಸೆ ಇಡಬೇಕು. ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ನಡೆದ ಬಂದ್ ಹಾಗೂ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಪಾಲ್ಗೊಳ್ಳುವ ಮೂಲಕ ಸಹಕರಿಸಿದ ಜನರಿಗೆ ಹಾಗೂ ವ್ಯಾಪಾರಿಗಳಿಗೆ, ಯುವಕರಿಗೆ ಕೃತಜ್ಞತೆ. ಜಿ.ಬಿ.ಜ್ಯೋತಿಗಣೇಶ್, ಶಾಸಕ

ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ: ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಪದವಿ, ಸ್ನಾತಕೋತ್ತರ ಕಾಲೇಜುಗಳ ತರಗತಿಗಳು, ವಿವಿ ಪರೀಕ್ಷೆಗಳು ನಡೆದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಕಾರ್ಯನಿರ್ವಹಿಸಿದವು. ನಗರದ ಎಂ.ಜಿ.ರಸ್ತೆ, ಬಿ.ಎಚ್.ರಸ್ತೆ, ಅಶೋಕ ರಸ್ತೆ, ಬಿ.ಜಿ.ಪಾಳ್ಯ ಸರ್ಕಲ್, ಮಂಡಿಪೇಟೆ ರಸ್ತೆ, ಗುಬ್ಬಿ ಗೇಟ್ ಸರ್ಕಲ್, ಎಸ್.ಎಸ್.ಪುರಂ. ಎಸ್‌ಐಟಿ ಮುಖ್ಯ ರಸ್ತೆ ಸೇರಿ ನಗರದ ಎಲ್ಲ ರಸ್ತೆಗಳಲ್ಲಿನ ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಸಾರಿಗೆ, ಖಾಸಗಿ ಬಸ್‌ಗಳು, ಕಾರುಗಳ, ಸರಕು ಸಾಗಣೆ ವಾಹನಗಳು ಹಾಗೂ ಆಟೋ ರಿಕ್ಷಾಗಳ ಸಂಚಾರ ಎಂದಿನಂತಿತ್ತು. ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿಲ್ಲ. ನಗರಕ್ಕೆ ಬರುವ, ನಗರದಿಂದ ಹೊರ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅಡಚಣೆ ಉಂಟಾಗಲಿಲ್ಲ. ಆರೋಗ್ಯ ಸೇವೆ ಎಂದಿನಂತಿತ್ತು, ಪೊಲೀಸ್ ವೈಫಲ್ಯ ಕಾರಣ: ಕಾರ್ಪೋರೇಟರ್ ಪತಿ ಇಸ್ಮಾಯಿಲ್ ಪ್ರಾಣ ಬೆದರಿಕೆ ಹಾಕಿದಾಗ ಪೊಲೀಸರು ಕ್ರಮ ಕೈಗೊಂಡಿದ್ದರೆ ಕೊಲೆಯ ಯತ್ನ ನಡೆಯುತ್ತಿರಲಿಲ್ಲ. ಇದಕ್ಕೆ ಪೊಲೀಸ್ ವೈಫಲ್ಯವೇ ಕಾರಣ ಎಂದು ವಿಎಚ್‌ಪಿ ವಿಭಾಗೀಯ ಸಂಚಾಲಕ ಬಸವರಾಜು ಆರೋಪಿಸಿದರು. ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರ್ಕಾರವು ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂಪಡೆದ ನಂತರ ಹಿಂದು ಕಾರ್ಯಕರ್ತರ ಪ್ರಾಯೋಜಿತ ಹತ್ಯೆಗಳು ಹೆಚ್ಚಾಗಿವೆ. ಮಂಗಳೂರು, ಕೊಡಗು, ಮೈಸೂರಿನಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗೆ ಕಾರಣ ಇದೇ ಜಿಹಾದಿ ಸಂಘಟನೆಗಳು ಎಂದು ಹಿಂಜಾವೇ ರಾಜ್ಯ ಕಾರ್ಯದರ್ಶಿ ಉಲ್ಲಾಸ್ ಆರೋಪಿಸಿದರು.

ಟಿಪ್ಪು ಖಡ್ಗಕ್ಕೆ ಹೆದರಿ ಮತಾಂತರಗೊಂಡ ಜಿಹಾದಿಗಳು ಈಗ ಶಿವಾಜಿ ವಂಶಸ್ಥರಿಗೆ ಸವಾಲು ಹಾಕುತ್ತಿದ್ದಾರೆ. ಹಿಂದು ಸಮಾಜ ರೊಚ್ಚಿಗೆದ್ದರೆ ಲಕ್ಷಾಂತರ ಮಂದಿ ರಸ್ತೆಗೆ ಬರುತ್ತಾರೆ. ಬೂದಿ ಮುಚ್ಚಿರುವ ಹಿಂದು ಸಮಾಜಕ್ಕೆ ಗಾಳಿ ನೀಡಿ ಬೆಂಕಿ ಹಚ್ಚುತ್ತಿದ್ದೀರಿ. ಆ ಬೆಂಕಿ ಜ್ವಾಲೆ ನಿಮ್ಮನ್ನೇ ಸುಡಲಿದೆ. ಉಲ್ಲಾಸ್, ಹಿಂಜಾವೇ ರಾಜ್ಯ ಕಾರ್ಯದರ್ಶಿ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಗೋರಕ್ಷಣೆ ಮಾಡುವ ನಿಟ್ಟಿನಲ್ಲಿ ಶಿರಾದಲ್ಲಿ ಗೋಶಾಲೆ ತೆರೆಯಲು ಜಾಗ ಗುರುತಿಸಲಾಗಿದೆ. ನಗರದಲ್ಲಿ ನಡೆಯುತ್ತಿರುವ ಅನಧಿಕೃತ ಕಸಾಯಿಖಾನೆಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ಕ್ರಮವಹಿಸಲಾಗುವುದು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ

ಹಲ್ಲೆಕೋರರ ಫೋಟೋ ವೈರಲ್: ಬಜರಂಗದಳ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಶುಕ್ರವಾರ ತುಮಕೂರು ಬಂದ್ ಕರೆ ನೀಡಿದ್ದ ಸಂದರ್ಭದಲ್ಲೇ ಗುಬ್ಬಿ ಗೇಟ್ ಬಳಿ ಮಂಗಳವಾರ ನಡೆದ ಹಲ್ಲೆ ಪ್ರಕರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ !

ನಾಲ್ವರು ಯುವಕರು ರಾಡ್‌ಗಳನ್ನು ಹಿಡಿದು ದ್ವಿಚಕ್ರವಾಹನಗಳಲ್ಲಿ ಕಾರನ್ನು ಹಿಂಬಾಲಿಸುತ್ತಿರುವ ಫೋಟೋ ವೈರಲ್ ಆಗಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net