

ತುಮಕೂರು: ಮೊಬೈಲ್ ಚಾರ್ಜರ್ ಕೊಡಲಿಲ್ಲವೆಂದು ಯುವಕ ನೇಣಿಗೆ ಶರಣಾದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ನಡೆದಿದೆ.
ನಿಖಿಲ್ ಗೌಡ (18) ಮೃತ ಯುವಕ. ಆಶಾ ಕಾರ್ಯಕರ್ತೆ ವರಲಕ್ಷ್ಮಮ್ಮನ ಪುತ್ರ ನಿಖಿಲ್ ಗೌಡ ಮೃತ ದುರ್ದೈವಿ. ಪಾವಗಡ ಪಟ್ಟಣದ ಶಾಂತಿ ಎಸ್ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ. ಭಾನುವಾರ ರಜೆ ಇದ್ದ ಕಾರಣ ಮನೆಯಲ್ಲಿಯೇ ಇದ್ದನು. ಈ ವೇಳೆ ತಾಯಿಯೊಂದಿಗೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲ ಎಂದು ಗಲಾಟೆ ಮಾಡಿದ್ದಾನೆ.
ಬಳಿಕ ತಾಯಿಯ ಬಳಿ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದಿದ್ದಾನೆ. ಆಗ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ತಾಯಿ ಹೇಳಿದ್ದಳು. ನಂತರ ವರಲಕ್ಷ್ಮಮ್ಮ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದರು. ವಾಪಾಸ್ ಮನೆಗೆ ಬಂದು ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್ ಗೌಡ ಬಾಗಿಲು ತೆಗೆದಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬಯಲಿಗೆ ಬಂದಿದೆ.
ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ವೈಎನ್ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಎಂಟು ವರ್ಷದ ಹಿಂದೆಯೇ ಈಕೆ ಪತಿ ಕೂಡಾ ಸಾವನ್ನಪ್ಪಿದ್ದರು. ವರಲಕ್ಷ್ಮಮ್ಮ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಿಸುತ್ತಿದ್ದರು.