

ನವದೆಹಲಿ: ಐಕಾನಿಕ್ ಪ್ರೆಸ್ಟೀಜ್ ಬ್ರ್ಯಾಂಡ್‌ನ ನಿವೃತ್ತ ಅಧ್ಯಕ್ಷ ಟಿಟಿ ಜಗನ್ನಾಥನ್ ಅವರು ನಿಧನ ಹೊಂದಿದ್ದಾರೆ. ಅವರು ಟಿಟಿಕೆ ಗ್ರೂಪ್‌ನ ಸ್ಥಾಪಕ ಮತ್ತು ಭಾರತದ ಮಾಜಿ ಹಣಕಾಸು ಸಚಿವ ಟಿಟಿ ಕೃಷ್ಣಮಾಚಾರಿ ಅವರ ಸೋದರಳಿಯ ಆಗಿದ್ದ ಅವರನ್ನು ಹೆಚ್ಚಾಗಿ "ದಿ ಕಿಚನ್ ಮೊಗಲ್" ಎಂದು ಕರೆಯಲಾಗುತ್ತಿತ್ತು.
ಈ ಬಗ್ಗೆ ಕಂಪನಿ ಪ್ರತಿಕ್ರಿಯಿಸಿದ್ದು, ಅವರ ಹಠಾತ್ ಮತ್ತು ಅನಿರೀಕ್ಷಿತ ನಿಧನವು ಕಂಪನಿಗೆ ತುಂಬಲಾರದ ನಷ್ಟವಾಗಿದೆ ಮತ್ತು ಕಂಪನಿಯ ಎಲ್ಲಾ ನಿರ್ದೇಶಕರು ಮತ್ತು ಉದ್ಯೋಗಿಗಳು ಅವರ ಕುಟುಂಬಕ್ಕೆ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದೆ.
ಅವರು 42 ಲಕ್ಷಕ್ಕೂ ಅಧಿಕ ಈಕ್ವಿಟಿ ಷೇರುಗಳನ್ನು ಹೊಂದಿದ್ದರು. ಜೊತೆಗೆ ಟಿಟಿ ಕೃಷ್ಣಮಾಚಾರಿ & ಕಂಪನಿಯಲ್ಲಿಯೂ ಸಹ ಪ್ರಮುಖ ಪಾಲುದಾರರಾಗಿದ್ದರು. ಈ ಹೂಡಿಕೆಗಳ ಮೂಲಕ ಅವರು ಸಂಸ್ಥೆಯ ಬೆಳವಣಿಗೆಯಲ್ಲಿ ನಿರಂತರ ಪಾತ್ರ ನಿರ್ವಹಿಸಿದ್ದರು. ಪ್ರೆಸ್ಟೀಜ್ ಬ್ರಾಂಡ್ ಅನ್ನು ಅಡುಗೆ ಮತ್ತು ಗೃಹೋಪಯೋಗಿ ಕ್ಷೇತ್ರದಲ್ಲಿ ಪ್ರಮುಖ ಘಟಕ್ಕೇರಿಸುವಲ್ಲಿ ಮಹತ್ತರವಾದ ಪಾತ್ರ ಇವರದ್ದಾಗಿತ್ತು. ಇವರ ಅಧ್ಯಕ್ಷತೆಯಲ್ಲಿ ಕಂಪನಿಯು ಗ್ರಾಹಕರಿಗಾಗಿ ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನೂರಾರು ಹೊಸ ಉತ್ಪನ್ನಗಳನ್ನು ಪರಿಚಯ ಮಾಡಿತು. ಅವರು ಐದು ದಶಕಗಳಿಗೂ ಹೆಚ್ಚು ಕಾಲ ಕಂಪನಿಯ ಮಂಡಳಿಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಹೌ ಟಿಟಿಕೆ ಪ್ರೆಸ್ಟೀಜ್ ಬಿಕೇಮ್ ಎ ಬಿಲಿಯನ್ ಡಾಲರ್ ಕಂಪನಿ ಎಂಬ ಪುಸ್ತಕವನ್ನು ಸಹ ಬರೆದಿದ್ದಾರೆ. ಟಿಟಿಕೆ ಗ್ರೂಪ್ ಅನ್ನು ಬೆಳೆಸುವಲ್ಲಿ ಮತ್ತು ಅದನ್ನು ಸಾಲ ಮುಕ್ತ ಉದ್ಯಮವನ್ನಾಗಿ ಮಾಡುವಲ್ಲಿ ಜಗನ್ನಾಥನ್ ಪ್ರಮುಖ ಪಾತ್ರ ವಹಿಸಿದರು. ಸುರಕ್ಷತೆ ಮತ್ತು ನಾವೀನ್ಯತೆಯ ವಿಶಿಷ್ಟ ಲಕ್ಷಣವಾದ 'ಗ್ಯಾಸ್ಕೆಟ್ ಬಿಡುಗಡೆ ವ್ಯವಸ್ಥೆ'ಯನ್ನು ಪರಿಚಯಿಸುವ ಮೂಲಕ ಭಾರತದ ಪ್ರೆಶರ್ ಕುಕ್ಕರ್ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
(ಏಜೆನ್ಸೀಸ್)