

ತಿರುಪತಿ: ತಿಮ್ಮಪ್ಪನ ದರ್ಶನಕ್ಕೆ ಅಲಿಪಿರಿಯಿಂದ ತಿರುಮಲಕ್ಕೆ ಬಸ್, ಕಾರು ಮತ್ತಿತರ ವಾಹನಗಳಲ್ಲಿ ತೆರಳುವಷ್ಟೇ ಮಂದಿ ಕಾಲ್ನಡಿಗೆಯಲ್ಲಿ ಏಳು ಬೆಟ್ಟ ಹತ್ತಿ ಹೋಗುತ್ತಾರೆ. ಆದರೆ ತಿರುಪತಿ ತಿರುಮಲ ದೇವಸ್ಥಾನದ (ಟಿಟಿಡಿ) ಅಧಿಕಾರಿಗಳು ಶ್ರೀವೆಂಕಟೇಶ್ವರ ಸ್ವಾಮಿಯ ಮೆಟ್ಟಿಲುಗಳ ಕಾಲ್ನಡಿಗೆ ಮಾರ್ಗವನ್ನು ಗುರುವಾರ(ಅ.17)ಮುಚ್ಚಲಾಗುವುದು ಎಂದು ಘೋಷಿಸಿದ್ದಾರೆ(TTD decision).
ತಿರುಪತಿಯಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುವಾರ ಭಕ್ತರು ಶ್ರೀವಾರಿ ಮೆಟ್ಟಿಲುಗಳ ಪಾದಯಾತ್ರೆಗೆ ತೆರಳಲು ಅವಕಾಶ ನಿರಾಕರಿಸಲಾಗುತ್ತದೆ.
ಹೀಗಾಗಿ ಮೆಟ್ಟಿಲುಗಳ ಮೂಲಕ ನಡೆದು ತಿಮ್ಮಪ್ಪನ ದರ್ಶನಕ್ಕೆ ಹೋಗಲು ಯೋಜಿಸುತ್ತಿರುವ ಭಕ್ತರು ತಕ್ಷಣ ನಿರ್ಧಾರವನ್ನು ಬದಲಿಸಬೇಕಾಗುತ್ತದೆ.
ಮುಂಜಾಗ್ರತಾ ಕ್ರಮವಾಗಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಶ್ರೀವಾರಿ ಮೆಟ್ಟಿಲುಗಳ ನಡಿಗೆ ಮಾರ್ಗವನ್ನು ಗುರುವಾರ ಬಂದ್ ಮಾಡಲಾಗುವುದು. ಆದರೆ, ಅಲಿಪಿರಿಯಿಂದ ನಡಿಗೆ ಮಾರ್ಗದ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಇದರಿಂದಾಗಿ ಅಲಿಪಿರಿ ಮಾರ್ಗವಾಗಿ ನಡೆದುಕೊಂಡು ತಿರುಮಲಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆಯಾಗುವ ಸಾಧ್ಯತೆ ಇಲ್ಲ.
ಶ್ರೀವಾರಿ ಮೆಟ್ಟಿಲುಗಳ ಮೂಲಕವೇ ತಿರುಮಲ ಬೆಟ್ಟದ ತುದಿಗೆ ಹೋಗಲು ಬಯಸುವವರು ಗುರುವಾರ ಆ ಮಾರ್ಗವಾಗಿ ಹೋಗಬಾರದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.