ವಿಜಯ ಮಲ್ಯ ಗಡಿಪಾರಿಗೂ ಮುನ್ನ ರಹಸ್ಯ ಕಾನೂನು ಅಗತ್ಯಗಳು ಪೂರೈಸಬೇಕು: ಬ್ರಿಟನ್​

vijay mallya
Published on

ನವದೆಹಲಿ: ಕೋಟ್ಯಂತರ ರೂಪಾಯಿ ಸಾಲ ಮರುಪಾವತಿಸದೇ ಬ್ರಿಟನ್​ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಬೇಕಾದರೆ ಮೊದಲು ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು ಎಂದು ಬ್ರಿಟನ್ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಬ್ಯಾಂಕುಗಳಿಗೆ ಸಾಲ ಮರುಪಾವತಿಸದೇ ವಂಚಿಸಿರುವ ಉದ್ಯಮಿ ವಿಜಯ ಮಲ್ಯ ತನ್ನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಮಾಡಿದ ಮನವಿಯ ವಿರುದ್ಧ ಮೇ ತಿಂಗಳಲ್ಲಿ ಬ್ರಿಟಿಷ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ಪ್ರಗತಿಯಲ್ಲಿದ್ದು, ಮಲ್ಯರನ್ನು ಗಡಿಪಾರು ಮಾಡಬೇಕಾದರೆ ಕೆಲವು ಅಗತ್ಯ ರಹಸ್ಯ ಕಾನೂನು ವಿಚಾರಗಳು ಇತ್ಯರ್ಥವಾಗಬೇಕು. ಇದು ಕಾನೂನಿಗೆ ಸಂಬಂಧಪಟ್ಟ ವಿಚಾರ. ಈಗ ಅದರ ಬಗ್ಗೆ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ ಎಂದು ಬ್ರಿಟನ್​ನ ಆ್ಯಕ್ಟಿಂಗ್ ಹೈಕಮಿಷನರ್​ ಜ್ಯಾನ್ ಥಾಮ್ಸನ್​ ತಿಳಿಸಿದ್ದಾರೆ.

ಆನ್​ಲೈನ್ ಮೀಡಿಯಾ ಬ್ರೀಫಿಂಗ್ ಸಂದರ್ಭದಲ್ಲಿ ಅವರು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಭಾರತ ಮತ್ತು ಬ್ರಿಟನ್ ಈ ಕಾನೂನು ವಿಚಾರಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಇದನ್ನು ಶೀಘ್ರವೇ ಬಗೆಹರಿಸುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಥಾಮ್ಸನ್ ಸ್ಪಷ್ಟಪಡಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net