

ಬೆಂಗಳೂರು: ನಾಗರ ಪಂಚಮಿಯು ಭಾರತದ ಬಹುತೇಕ ಭಾಗಗಳಲ್ಲಿ ಹಿಂದೂಗಳು ಆಚರಿಸುವ ಹಿಂದೂ ಹಬ್ಬವಾಗಿದೆ. ಇದನ್ನು ಶ್ರಾವಣ ಮಾಸ ಅಥವಾ ಶ್ರಾವಣ ಮಾಸದ 5 ನೇ ದಿನದಂದು ಆಚರಿಸಲಾಗುತ್ತದೆ. ಈ ನಾಗರ ಪಂಚಮಿಯಂದು ನಾಗ ದೇವರ ನೈವೇದ್ಯಕ್ಕೆಂದು ಹಕವಾರು ತಿಂಡಿಗಳನ್ನು ಮಾಡುತ್ತೇವೆ. ಈ ಹಬ್ಬಗಳಂದು ಮಾಡುವ ಅಡುಗೆಯೂ ಬಹಳ ವಿಶೇಷ. ಅಂಥಾ ಕೆಲವು ವಿಶೇಷ ಅಡುಗೆಗಳ ವಿವರ ಇಲ್ಲಿದೆ.... ಬನ್ನಿ ಹಬ್ಬಕ್ಕೆ ರವೆ ಉಂಡೆ ಹಾಗೂ ಕಳಲೆ ಪಲ್ಯ ಮಾಡುವ ವಿಧಾನಗಳನ್ನು ನೋಡೋಣ...
ರವೆ ಉಂಡೆ ಮಾಡಲು ಬೇಕಾಗುವ ಸಾಮಗ್ರಿಗಳು:
* ರವೆ – ಎರಡು ಕಪ್
* ತುಪ್ಪ – ಅರ್ಧ ಕಪ್
* ಸಕ್ಕರೆ – 1 ಕಪ್
* ನೀರು – ಅಳತೆಗೆ ತಕ್ಕಷ್ಟು
* ಏಲಕ್ಕಿ ಪುಡಿ – ಅರ್ಧ ಸ್ಪೂನ್
* ಹಾಲು – ಅರ್ಧ ಕಪ್
* ಗೋಡಂಬಿ – ನಿಮಗೆ ಬೇಕಾದಷ್ಟು
* ಒಣದ್ರಾಕ್ಷಿ – ನಿಮಗೆ ಬೇಕಾದಷ್ಟು
* ತೆಂಗಿನಕಾಯಿ ತುರಿ – ಒಂದು ಕಪ್
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ತುಪ್ಪದೊಂದಿಗೆ ಫ್ರೈ ಮಾಡಿ ಪಕ್ಕಕ್ಕೆ ಇರಿಸಿ.
* ಬಾಣಲೆಯಲ್ಲಿ ರವಾ ಹಾಕಿ ತಿಳಿ ಕಂದು ಬಣ್ಣಕ್ಕೆ ಬದಲಾಯಿಸುವವರೆಗೆ ಮತ್ತು ಪರಿಮಳ ಬರುವವರೆಗೆ ಹುರಿಯಿರಿ.
* ನೀರ ಮತ್ತು ಸಕ್ಕರೆ ಸೇರಿಸಿ ಸಕ್ಕರೆ ಕರಗುವವರೆಗೂ ಬೇರೆಸಿ 5 ನಿಮಿಷಗಳ ಕಾಲ ಕುದಿಸಿ. ನಂತರ ತೆಂಗಿನಕಾಯಿ ತುರಿಯನ್ನು ಹುರಿದುಕೊಳ್ಳಿ ಅದಕ್ಕೆ ರವಾ, ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಏಲಕ್ಕಿ ಪುಡಿ ಮತ್ತು ಸಕ್ಕರೆ ಪಾಕ ಮತ್ತು ಹಾಲನ್ನು ಸೇರಿಸಿ ಹುರಿಯಿರಿ.
* ನಂತರ ಆ ಮಿಶ್ರಣವನ್ನು ತೆಗೆದು ಕೈಗೆ ತುಪ್ಪ ಹಚ್ಚಿಕೊಂಡು ಉಂಡೆಗಳ ಮಾಡಿಕೊಂಡರೆ ರುಚಿಯಾದ ಲಾಡು ಸವಿಯಲು ಸಿದ್ಧವಾಗುತ್ತದೆ.
ಕಳಲೆ ಪಲ್ಯ ಮಾಡಲು ಬೇಕಾಗುವ ಸಾಮಗ್ರಿಗಳು:
ಕಳಲೆ- ನಿಮಗೆ ಬೇಕಾದಷ್ಟು
ಉದ್ದಿನ ಬೇಳೆ,ಹೆಸರು ಕಾಳು ಮತ್ತು ಕಡಲೆ ಕಾಳು- ಎಲ್ಲಾ ಸೇರಿ ಅರ್ಧ ಕಪ್
ಬೆಳ್ಳುಳ್ಳಿ - 4
ಸಾಸಿವೆ- 1 ಚಮವ
ಈರುಳ್ಳಿ - 1
ಅಡುಗೆ ಎಣ್ಣೆ- ಅರ್ಧ ಕಪ್
ರುಚಿಗೆ ತಕ್ಕಷ್ಟು ಉಪ್ಪು
ಜೀರಿಗೆ, ಮೆಂತೆ, ಒಣಮೆಣಸು - ಸ್ವಲ್ಪ
ಚಿಟಿಕೆ ಅರಿಶಿನ ಪುಡಿ
ಕೊತ್ತುಂಬರಿ ಸೊಪ್ಪು- ಸ್ವಲ್ಪ
ಟೊಮೆಟೊ -1
ಹುಣಸೆ ಹಣ್ಣಿನ ರಸ- ಸ್ವಲ್ಪ
ಮಾಡುವ ವಿಧಾನ:
* ಕಳಲೆಯ ಮೇಲ್ಭಾಗದ ಸಿಪ್ಪೆ/ತೊಗಟೆಯನ್ನು ತೆಗೆದು ಸಣ್ಣಗೆ ತುಂಡು ತುಂಡಾಗಿ ಕತ್ತರಿಸಿ ಮೂರು ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಪ್ರತಿನಿತ್ಯವೂ ಅದನ್ನು ತೊಳೆದು ನೀರು ಬದಲಿಸಬೇಕು. ಕಹಿ ಅಂಶ ಬಿಡುತ್ತದೆ.
* ಪಲ್ಯ ಮಾಡುವ 6-7 ಗಂಟೆಗಳ ಮೊದಲು ಹೆಸರು ಕಾಳು ಮತ್ತು ಕಡಲೆ ಕಾಳನ್ನು ನೀರಿನಲ್ಲಿ ನೆನೆಸಿಡಬೇಕು.
* ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಉದ್ದಿನ ಬೇಳೆ, ಬೆಳ್ಳುಳ್ಳಿ, ಸಾಸಿವೆ, ಬೇವಿನ ಸೊಪ್ಪು, ಈರುಳ್ಳಿ ಹಾಕಿ ಒಗ್ಗರಣೆ ಹಾಕಬೇಕು. ನಂತರ ನೆನೆಸಿಟ್ಟ ಕಳಲೆ, ಕಡಲೆ ಕಾಳು, ಹೆಸರು ಕಾಳನ್ನು ತೊಳೆದು ಒಗ್ಗರಣೆಗೆ ಹಾಕಿ ಬೇಯಲು ಇಡಬೇಕು.
* ಜೀರಿಗೆ, ಮೆಂತೆ, ಒಣ ಮೆಣಸನ್ನು ಹುರಿದುಕೊಳ್ಳಬೇಕು. ಅಗತ್ಯಕ್ಕೆ ತಕ್ಕಷ್ಟು ತೆಂಗಿನ ಕಾಯಿ ತುರಿದು ಈ ಹುರಿದ ಪದಾರ್ಥಗಳನ್ನು ಕಾಯಿಗೆ ಹಾಕಿ, ಚಿಟಿಕೆ ಅರಿಶಿನ ಪುಡಿ, ಕೊತ್ತುಂಬರಿ ಸೊಪ್ಪು, ಸ್ವಲ್ಪ ಟೊಮೆಟೊ, ಸ್ವಲ್ಪ ಹುಣಸೆ ಹಣ್ಣಿನ ರಸ ಸೇರಿಸಿ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ರುಬ್ಬಿ ಮಸಾಲೆ ಮಾಡಿಕೊಳ್ಳಬೇಕು.
* ನಂತರ 10 ನಿಮಿಷಗಳ ಕಾಲ ಮಸಾಲೆಯೊಂದಿಗೆ ಬೇಯಿಸಿದರೆ ಕಳಲೆ ಪಲ್ಯ ರೆಡಿ. ಬಿಸಿ ಬಿಸಿ ಅನ್ನ ಅಥವಾ ರೊಟ್ಟಿ ಜೊತೆ ಸವಿಯಿರಿ.