ಸತ್ಯವೇ ಧರ್ಮದ ಸ್ವರೂಪ

12kgl01
ಕಾರ್ಗಲ್‌ನ ಬಿದರೂರು ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ದಶಲಕ್ಷಣದ ಮಹಾಪರ್ವದ ಪ್ರಯುಕ್ತ ಏರ್ಪಡಿಸಿರುವ ಐದನೇ ದಿನದ ಉತ್ತಮ ಸತ್ಯಧರ್ಮದ ಪೂಜೆಯಲ್ಲಿ ಭಾಗವಹಿಸಿದ್ದ ಜೈನ ಭಕ್ತರು.
Published on

ಕಾರ್ಗಲ್: ಸತ್ಯವಿಲ್ಲದ ಸ್ಥಾನದಲ್ಲಿ ಧರ್ಮವು ಇಲ್ಲ. ಸತ್ಯವೇ ಧರ್ಮದ ಸ್ವರೂಪ. ಸುಳ್ಳು, ಮೋಸ, ವಂಚನೆ ತೊರೆದು ಪ್ರಾಮಾಣಿಕವಾಗಿ ಬಾಳುವುದೇ ಉತ್ತಮ ಸತ್ಯ ಧರ್ಮದ ತಿರುಳಾಗಿದೆ ಎಂದು ಪ್ರಧಾನ ಪುರೋಹಿತ ವಿದ್ಯಾಧರ ಇಂದ್ರ ಹೇಳಿದರು.

ಬಿದರೂರು ಶ್ರೀ ವರ್ಧಮಾನ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಆಯೋಜಿಸಿರುವ ದಶಲಕ್ಷಣದ ಪೂಜಾ ಕಾರ್ಯದಲ್ಲಿ ಗುರುವಾರ ಭಾಗವಹಿಸಿದ್ದ ಜೈನ ಭಕ್ತರಿಗೆ ಉತ್ತಮ ಸತ್ಯ ಧರ್ಮದ ಬಗ್ಗೆ ತಿಳಿಸಿ ಪೂಜೆ ನೆರವೇರಿಸಿ ಮಾತನಾಡಿ, ದಶಲಕ್ಷಣದ ಹತ್ತು ಮೆಟ್ಟಿಲುಗಳ ಪೈಕಿ ಐದನೇಯದು ಉತ್ತಮ ಸತ್ಯಧರ್ಮ ಎಂದು ತಿಳಿಸಿದರು.

ಬೆಳಗ್ಗೆ ಪಂಚಾಮೃತ ಅಭಿಷೇಕ, ಶಾಂತಿಧಾರೆಯೊಂದಿಗೆ ದಶಲಕ್ಷಣದ ಪೂಜೆ ಆರಂಭವಾಯಿತು. ದೇವರಿಗೆ ಅತ್ಯಂತ ಪ್ರಿಯವಾದ ಜಲ, ಗಂಧ, ಅಕ್ಕಿ, ಪುಷ್ಪ, ಚರು, ದೀಪ, ಫಲ ಮತ್ತು ಧೂಪವನ್ನು ಒಳಗೊಂಡ ಅಷ್ಟ ದ್ರವ್ಯಗಳ ಅರ್ಗ್ಯಗಳಿಂದ ಬೆಳಗಿ ಶ್ರೀ ವರ್ಧಮಾನ ಸ್ವಾಮಿಗೆ ಸಮರ್ಪಣೆ ಮಾಡಲಾಯಿತು. ಮಂಡವಳ್ಳಿ, ತುಂಬ್ರಿ ಮತ್ತು ಕಸಗುಪ್ಪೆ ಗ್ರಾಮದ ಜೈನ ಭಕ್ತರು ಪೂಜೆಯಲ್ಲಿ ಭಾಗವಹಿಸಿದ್ದರು.

ಪುರೋಹಿತರಾದ ವಿದ್ಯಾಧರ ಇಂದ್ರ, ಸತ್ಯೇಂದ್ರ ಇಂದ್ರ, ಆದರ್ಶ ಇಂದ್ರ ಮತ್ತು ಪದ್ಮರಾಜ ಇಂದ್ರರು ದಶಲಕ್ಷಣದ ಪೂಜೆಯ ನೇತೃತ್ವ ವಹಿಸಿ ಜೈನ ಧರ್ಮದಲ್ಲಿ ಉತ್ತಮ ಧರ್ಮದ ಮಹತ್ವದ ಬಗ್ಗೆ ತಿಳಿಸಿದರು. ಬಿದರೂರು ಜೈನ ಬಸದಿ ಸಮಿತಿ ಪದಾಧಿಕಾರಿಗಳು ಹಾಗೂ ಮರಬಿಡಿ ಸೀಮೆಯ ಶ್ರವಾಕ ಮತ್ತು ಶ್ರಾವಕಿಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net