

ಶಿವಮೊಗ್ಗ: ದೇವರನ್ನು ನಂಬೇಕು. ಆದರೆ ಅದು ನಂಬಿಕೆ ಮೂಢನಂಬಿಕೆ ಆಗಬಾರದು. ಹುಸಿ, ಉತ್ಪ್ರೇಕ್ಷೆ ನಂಬಿಕೆಗಳು ಇರಬಾರದು. ಜೀವನಕ್ಕೆ ಹಣವೂ ಬೇಕು. ಅದಕ್ಕೊಂದು ಮಿತಿಯೂ ಇರಬೇಕು. ಬದುಕು ಸುಖಕರವಾಗಿರಲು ಹಣದ ಜತೆಗೆ ಆಹಾರ ಮತ್ತು ನಿದ್ರೆ ಮುಖ್ಯ ಎಂದು ಪದ್ಮಶ್ರೀ ಪುರಸ್ಕೃತ, ಮಾನಸಿಕ ಆರೋಗ್ಯ ತಜ್ಞ ಡಾ. ಸಿ.ಆರ್.ಚಂದ್ರಶೇಖರ್ ಹೇಳಿದರು.
ನಗರದ ಶ್ರೀ ಮಾತಾ ಮಾಂಗಲ್ಯ ಮಂದಿರದಲ್ಲಿ ಭಾನುವಾರ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ನೆಮ್ಮದಿ ಮತ್ತು ಸಮಾಧಾನ ಹೇಗೆ ? ವಿಷಯ ಕುರಿತು ಮಾತನಾಡಿದ ಅವರು, ಜೀವನದಲ್ಲಿ ನೆಮ್ಮದಿ, ಸಮಾಧಾನವಿದ್ದರೆ ಆರೋಗ್ಯ ಸುಧಾರಣೆ ಆಗಲಿದೆ. ನೆಮ್ಮದಿಯನ್ನು ಕಳೆದುಕೊಂಡರೆ ಎಲ್ಲ ಸಮಸ್ಯೆಗಳು ಹುಡುಕಿಕೊಂಡು ಬರಲಿವೆ. ಒಬ್ಬ ಮನುಷ್ಯ ಕನಿಷ್ಠ 6ರಿಂದ 7 ಗಂಟೆ ನಿದ್ರೆ ಮಾಡಬೇಕು. 25 ವಯಸ್ಸಿನವರೆಗೂ ಬೆಳವಣಿಗೆ ಇರಲಿದೆ. ದೇಹದ ಅಂಗಗಳು ಬೆಳವಣಿಗೆ ಆಗಬೇಕಾದರೆ ನಿದ್ರೆ ಬೇಕು ಎಂದರು.
ಜೀವನದಲ್ಲಿ ಪ್ರೀತಿ ಸಾಮರಸ್ಯ ಇರಬೇಕಿದೆ. ಮಾನಸಿಕ ಚಟುವಟಿಕೆ ಇರಬೇಕು. ಮಾಡುವ ಉದ್ಯೋಗವನ್ನು ಪ್ರೀತಿಸುವ ಗುಣವಿರಬೇಕು. ಇಂದು ಶೇ.70ರಷ್ಟು ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದು, ಮೊಬೈಲ್ ಕೊಡಿಸದ್ದಕ್ಕೆ ತಂದೆ, ತಾಯಿಯನ್ನೂ ಕೊಲೆ ಮಾಡುವ ಮಟ್ಟಕ್ಕೆ ಯುವ ಪೀಳಿಗೆ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪದ್ಮಶ್ರೀ ಪುರಸ್ಕೃತ, ಮಾನಸಿಕ ಆರೋಗ್ಯ ತಜ್ಞ ಡಾ. ಸಿ.ಆರ್.ಚಂದ್ರಶೇಖರ್, ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ಕಾರ್ಯದರ್ಶಿ ವೆಂಕಟೇಶ್ ಉಪಸ್ಥಿತರಿದ್ದರು.