

ಆಧುನಿಕ ಭೌಗೋಳಿಕ-ರಾಜಕೀಯ ಸನ್ನಿವೇಶದಲ್ಲಿ ಆರ್ಥಿಕ ನೀತಿಯು ಆಗಾಗ ರಾಜಕಾರಣದ ಒಂದು ಮಹತ್ವದ ಸಾಧನವಾಗಿ ಪರಿಣಮಿಸುತ್ತಿದೆ. ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಸುಂಕವು ಈ ಸಾಧನವಾಗಿರುವುದನ್ನು ನಾವೀಗ ನೋಡುತ್ತಿದ್ದೇವೆ. ಜಾಗತಿಕ ವಾಣಿಜ್ಯವನ್ನು ಮರುರೂಪಿಸಲು, ವಿರೋಧಿಗಳನ್ನು ಶಿಕ್ಷಿಸಲು ಮತ್ತು ಮಿತ್ರಪಕ್ಷಗಳು ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಒತ್ತಡ ಹೇರಲು ಆರ್ಥಿಕ ನೀತಿ ದೊಡ್ಡ ಸಲಕರಣೆಯಾಗಲಿದೆ ಎನ್ನುವುದು ಅದರ ದೃಢನಂಬಿಕೆಯಾಗಿದೆ. ವ್ಯಾಪಾರ ಕೊರತೆ (ಟ್ರೇಡ್ ಡಿಫಿಸಿಟ್) ನೀಗಿಸುವುದು ಹಾಗೂ ಅಮೆರಿಕದ ಉದ್ಯೋಗಗಳನ್ನು ಅಮೆರಿಕನ್ನರಿಗೇ ವಾಪಸ್ ಸಿಗುವಂತೆ ಮಾಡುವುದು ಇದರ ಘೊಷಿತ ಉದ್ದೇಶವಾಗಿದೆ. ಆದರೆ, ಅದನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಿಶೇಷವಾಗಿ ಹಿಂದು ಮಹಾಸಾಗರ-ಶಾಂತ ಮಹಾಸಾಗರ (ಇಂಡೋ-ಪೆಸಿಫಿಕ್) ವಲಯದಲ್ಲಿ ಅನುದ್ದೇಶಿತ ಸರಣಿ ಪರಿಣಾಮಗಳು ಉಂಟಾಗಲಿವೆ ಎನ್ನುವುದು ಗೊತ್ತಾಗುತ್ತದೆ. ಈ ವಲಯದಲ್ಲಿ ನಿರ್ಣಾಯಕ ಪಾಲುದಾರಿಕೆಗಳ ಸಂಬಂಧಗಳು ಹಳಸುತ್ತಿವೆ ಹಾಗೂ ಯಾವ ಮೈತ್ರಿಗಳನ್ನು ಹಾಳುಮಾಡಬೇಕೆಂದು ಬಯಸಲಾಗಿದೆಯೋ ಅದುವೇ ಬಲಗೊಳ್ಳುತ್ತಿದೆ. ಪ್ರಮುಖ ನಿರ್ಣಾಯಕ ಪಾಲುದಾರನಾದ ಭಾರತದೊಂದಿಗಿನ ಬಾಂಧವ್ಯದ ಮೇಲಿನ ಪರಿಣಾಮ ಹಾಗೂ ಒಟ್ಟಾರೆಯಾಗಿ ಜಾಗತಿಕ ಆರ್ಥಿಕತೆ ಮತ್ತು ಭೌಗೋಳಿಕ-ರಾಜಕೀಯ ಪರಿಸ್ಥಿತಿ ಮೇಲೆ ಟ್ರಂಪ್ರ ಟ್ಯಾರಿಫ್ ನೀತಿಯ ಬಹುಮುಖಿ ಪರಿಣಾಮಗಳನ್ನು ಪರಿಶೀಲಿಸೋಣ.
ವಿದೇಶಾಂಗ ನೀತಿಯ ಅಸ್ತ್ರ: ಟ್ರಂಪ್ ಆಡಳಿತವು ಸುಂಕಗಳನ್ನು ಆರ್ಥಿಕ ಸನ್ನೆಗಳಾಗಿ ಮಾತ್ರವೇ ಬಳಸುತ್ತಿಲ್ಲ. ವಿದೇಶ ನೀತಿಗಳ ಮೇಲೆ ಒತ್ತಡ ಹೇರುವುದು ಕೂಡ ಅದರ ಉದ್ದೇಶವಾಗಿದೆ. ಅದರ ತರ್ಕ ತುಂಬ ಸರಳ; ಆದರೆ ಭಂಡತನದ್ದಾಗಿದೆ. ಅಮೆರಿಕಕ್ಕೆ ರಫ್ತು ಮಾಡುವ, ಜಗತ್ತಿನ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಒಂದಾದ ದೇಶವೊಂದರ ಮೇಲೆ ಗಣನೀಯ ತೆರಿಗೆಗಳನ್ನು ಹೇರುವ ಮೂಲಕ ಆ ದೇಶವು ತನ್ನ ಬೇಡಿಕೆಗಳಿಗೆ ಸುಲಭವಾಗಿ ಮಣಿಯುವಂತೆ ಮಾಡಬಹುದೆನ್ನುವುದು ಅಮೆರಿಕದ ಲೆಕ್ಕಾಚಾರವಾಗಿದೆ. ಅನ್ಯಾಯದ ವಾಣಿಜ್ಯ ಕ್ರಮಗಳು ಎಂದು ಅಮೆರಿಕ ಭಾವಿಸುವ ನೀತಿಗಳಿಗೆ ಈ ದೇಶಗಳನ್ನು ಹೊಣೆಗಾರರನ್ನಾಗಿ ಮಾಡಲು, ಅಥವಾ ಇತ್ತೀಚೆಗೆ ಅವುಗಳ ಭೌಗೋಳಿಕ-ರಾಜಕೀಯ ಅನುಕೂಲಕ್ಕೆ ಹೊಂದಿಸಿಕೊಳ್ಳುವಂತೆ ಮಾಡಲು, ಈ ತೆರಿಗೆಗಳು ‘ಆರ್ಥಿಕ ನ್ಯಾಯ’ವಾಗಿದೆ ಎಂಬುದು ಅಮೆರಿಕ ಆಡಳಿತದ ವಾದ.
ಆದರೆ, ಈ ಧೋರಣೆಯು ಅರ್ಥಶಾಸ್ತ್ರಜ್ಞರು ಮತ್ತು ನೀತಿ ವಿಶ್ಲೇಷಕರಿಂದ ವ್ಯಾಪಕ ಟೀಕೆಗೆ ಒಳಗಾಗಿದೆ. ವೆಚ್ಚವನ್ನು ಪ್ರಧಾನವಾಗಿ ಆಮದುದಾರ ಭರಿಸಬೇಕೇ ಹೊರತು ರಫ್ತುದಾರ ಅಲ್ಲವೆಂಬುದು ಸುಂಕ ನೀತಿಯ ಮೂಲಭೂತ ವಾಸ್ತವ. ಸರಕುಗಳು ಅಮೆರಿಕವನ್ನು ಪ್ರವೇಶಿಸುತ್ತಿದ್ದಂತೆ, ಅಮೆರಿಕದ ಕಂಪನಿಗಳು ತೆರಿಗೆಗಳನ್ನು ಪಾವತಿಸುತ್ತವೆ. ಇದರಿಂದ ಅವುಗಳ ಪೂರೈಕೆ ಸರಪಣಿಯಲ್ಲಿ ವೆಚ್ಚದ ಏರಿಕೆಯಾಗುತ್ತದೆ. ಬೆಲೆಗಳನ್ನು ಕಡಿಮೆ ಮಾಡುವಂತೆ ವಿದೇಶಿ ಸರಬರಾಜುದಾರರ ಮೇಲೆ ಒತ್ತಡ ಹೇರಲು ಕೆಲವು ಕಂಪನಿಗಳಿಗೆ ಸಾಧ್ಯವಾಗಬಹುದಾದರೂ ದರ ಹೆಚ್ಚಳದ ಹೊರೆಯನ್ನು ಬೆಲೆಯೇರಿಕೆ ಮೂಲಕ ಅಮೆರಿಕನ್ ಗ್ರಾಹಕರ ಹೆಗಲಿಗೆ ವರ್ಗಾಯಿಸುವುದು ಸಾಮಾನ್ಯವಾಗಿ ನಡೆದುಬಂದ ಪದ್ಧತಿ. ರಫ್ತುದಾರ ದೇಶಗಳು ಈ ಸುಂಕಗಳನ್ನು ಪಾವತಿಸುತ್ತವೆ ಎಂಬ ಆಡಳಿತದ ಹೇಳಿಕೆಗೆ ಇದು ವ್ಯತಿರಿಕ್ತವಾಗಿದೆ. ಈ ‘ಸುಂಕ ಸಮರ’ವು ಅಮೆರಿಕದ ಆರ್ಥಿಕತೆಯ ಮಂದಗತಿಗೆ ಕಾರಣವಾಗಬಹುದು; ನೀತಿಯ ಘೊಷಿತ ಉದ್ದೇಶಗಳಿಗೆ ಸ್ವಯಂ-ಹಾನಿ ಆಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಭಾರತದ ಅಚಲ ವ್ಯೂಹಾತ್ಮಕ ಸ್ವಾಯತ್ತೆ: ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು, ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಾಂಧವ್ಯವು ಒಂದು ಕಾಲದಲ್ಲಿ ಎದ್ದುಕಾಣುವಂತಿತ್ತು ಹಾಗೂ ಚೀನಾದ ಬೆಳೆಯುತ್ತಿರುವ ಪ್ರಭಾವವನ್ನು ಎದುರಿಸಲು ವ್ಯೂಹಾತ್ಮಕ ದೃಷ್ಟಿಕೋನವನ್ನು ಹಂಚಿಕೊಂಡಿತ್ತು. ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಅದ್ದೂರಿ ಕಾರ್ಯಕ್ರಮಗಳನ್ನು ನಾವು ಮರೆಯಲಾದೀತೇ? ಆದರೆ, ಈ ಭಾಗಿದಾರಿಕೆಯು ಟ್ರಂಪ್ರ ಸುಂಕ ನೀತಿಯ ನೇರ ಪರಿಣಾಮವಾಗಿ ಈಗ ಬಿಕ್ಕಟ್ಟಿನಲ್ಲಿದೆ. ಇದಕ್ಕೆ ಭಾರತ ದೃಢ ಪ್ರತಿಕ್ರಿಯೆಯನ್ನು ನೀಡುತ್ತಿದ್ದು, ಇದನ್ನು ಅರ್ಥಮಾಡಿಕೊಳ್ಳಲು ಅದರ ವಿದೇಶಾಂಗ ನೀತಿಯ ಐತಿಹಾಸಿಕ ಧೋರಣೆಯನ್ನು ಗಮನಿಸಬೇಕಾಗುತ್ತದೆ. ವ್ಯೂಹಾತ್ಮಕ ಸ್ವಾಯತ್ತೆಗೆ ಬದ್ಧತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳ ಉತ್ತೇಜನ ಈ ನೀತಿಯ ಮೂಲಸ್ರೋತವಾಗಿದೆ.
ಸ್ವಾತಂತ್ರ್ಯ ಗಳಿಸಿದಾಗಿನಿಂದಲೂ ಭಾರತ ಅಪಾರ ಒತ್ತಡದ ನಡುವೆಯೂ ತನ್ನದೇ ಹಾದಿಯನ್ನು ರೂಪಿಸಿಕೊಳ್ಳುವ ಅಚಲ ಸಂಕಲ್ಪವನ್ನು ಪ್ರದರ್ಶಿಸಿದೆ. 1960ರ ದಶಕದಲ್ಲಿ, ‘ಪಿಎಲ್ 480’ ಕಾರ್ಯಕ್ರಮದಡಿ ಆಹಾರದ ನೆರವಿಗಾಗಿ ಭಾರತ ದೊಡ್ಡ ಪ್ರಮಾಣದಲ್ಲಿ ಅಮೆರಿಕವನ್ನು ಅವಲಂಬಿಸಿದ್ದರೂ ವಿಯೆಟ್ನಾಂ ಕುರಿತ ಅಮೆರಿಕನ್ ನೀತಿಯನ್ನು ಟೀಕಿಸಲು ಹಿಂಜರಿಯಲಿಲ್ಲ. ಮತ್ತೆ 1960ರ ದಶಕದ ಕೊನೆಯ ಭಾಗದಲ್ಲಿ, ಸೀಮಿತ ಸಂಪನ್ಮೂಲಗಳೊಂದಿಗೆ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವಾದರೂ, ತಾರತಮ್ಯದಿಂದ ಕೂಡಿದ್ದ ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ (ಎನ್ಪಿಟಿ) ಸಹಿ ಹಾಕಲು ನಿರಾಕರಿಸಿತು. ಅದಾಗಿ ಕೆಲವು ದಶಕಗಳ ನಂತರ, 1998ರಲ್ಲಿ ಪರಮಾಣು ಪರೀಕ್ಷೆಗಳನ್ನು ನಡೆಸಿದ ಮೇಲೆ ತೀವ್ರ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಭಾರತ ತಡೆದುಕೊಂಡಿತು. ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಉಂಟಾಗಬಹುದೆಂದು ರಾಜಿ ಮಾಡಿಕೊಳ್ಳಲು ಸಮ್ಮತಿಸಲಿಲ್ಲ. ಬಾಹ್ಯ ಒತ್ತಡಗಳ ಬದಲಿಗೆ ಭಾರತ ತನ್ನ ರಕ್ಷಣಾ ಹಿತಾಸಕ್ತಿ ಮತ್ತು ಸಾರ್ವಭೌಮತ್ವಕ್ಕೆ ಒತ್ತು ನೀಡುತ್ತದೆ. ಆರ್ಥಿಕ ಮತ್ತು ರಾಜತಾಂತ್ರಿಕವಾಗಿ ಆಗುವ ನಷ್ಟವನ್ನು ಅದು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂಬುದಕ್ಕೆ ಈ ಐತಿಹಾಸಿಕ ಪ್ರಕರಣಗಳು ಸಾಕ್ಷಿಯಾಗಿವೆ.
ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಲು ಈ ಐತಿಹಾಸಿಕ ವಾಸ್ತವ ಕನ್ನಡಕವನ್ನು ಒದಗಿಸುತ್ತದೆ. ಯೂಕ್ರೇನ್ ಮೇಲಿನ ರಷ್ಯಾ ಆಕ್ರಮಣದ ನಂತರ ಇತರ ಅನೇಕ ದೇಶಗಳಂತೆ ಭಾರತ ಕೂಡ ರಷ್ಯಾದ ರಿಯಾಯಿತಿ ದರದ ತೈಲದ ಲಾಭವನ್ನು ಪಡೆಯಲು ಮುಂದಾಗಿ ಆಮದನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು. ಅದೇ ವೇಳೆ, ಸುಧಾರಿತ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಸಹಿತ ರಷ್ಯಾದಿಂದ ರಕ್ಷಣಾ ಸಲಕರಣೆಗಳ ಆಮದನ್ನು ಮುಂದುವರಿಸಿತು. ಇವುಗಳು, ರಷ್ಯಾವನ್ನು ಪ್ರತ್ಯೇಕಿಸುವ ತನ್ನ ನೀತಿಗೆ ನೇರವಾದ ಸವಾಲೆಂದು ಪರಿಗಣಿಸಿದ ಟ್ರಂಪ್ ಆಡಳಿತ, ಈಗ ಭಾರತದ ಅನೇಕ ಸರಕುಗಳ ಮೇಲೆ ಶೇಕಡ 50 ಸುಂಕವನ್ನು ಹೇರಿದೆ. ಏಷ್ಯಾದ ಒಂದು ಪ್ರಮುಖ ಪಾಲುದಾರ ದೇಶದ ಮೇಲೆ ಹಿಂದೆಂದೂ ಹೇರದ ಈ ತೀವ್ರವಾದ ದಂಡನೆಯ ರೂಪದ ಸುಂಕವು ರಷ್ಯಾದಿಂದ ತೈಲ ಆಮದು ಮುಂದುವರಿಕೆಗೆ ನೇರವಾಗಿ ಸಂಬಂಧಿಸಿದೆ. ಈ ಮೂಲಕ ಭಾರತದ ವಿದೇಶಾಂಗ ನೀತಿ ಮೇಲೆ ಪ್ರಭಾವ ಬೀರುವುದು ಅಮೆರಿಕದ ಗುರಿಯಾಗಿದೆ.
ಭಾರತ ಇದಕ್ಕೆ ದೃಢವಾದ ಪ್ರತಿಕ್ರಿಯೆ ನೀಡಿದೆ. ಭಾರತ ಯಾವತ್ತೂ ತನ್ನ ರೈತರು, ಹೈನುಗಾರರು ಮತ್ತು ಮೀನುಗಾರರ ಹಿತಾಸಕ್ತಿಗಳ ಜತೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ಘೊಷಿಸಿದರು. ಅಮೆರಿಕದ ಕ್ರಮವು ಒಂದು ‘ಭಂಡ ಒತ್ತಡ’ ಹಾಗೂ ಭಾರತದ ಸಾರ್ವಭೌಮ ವಿದೇಶಾಂಗ ನೀತಿ ನಿರ್ಧಾರಗಳಲ್ಲಿ ‘ತೀವ್ರ ಹಸ್ತಕ್ಷೇಪ’ ಎಂದು ಭಾರತ ಅಭಿಪ್ರಾಯಪಟ್ಟಿದೆ.
ಟ್ರಂಪ್ ಸುಂಕನೀತಿಯಿಂದಾಗಿ ಎರಡೂ ಕಡೆ ಪರಿಣಾಮಗಳಾಗಬಹುದಾಗಿದೆ. ಭಾರತದ ಬೆಳವಣಿಗೆ ದರದಲ್ಲಿ ಕುಸಿತವಾಗಬಹುದೆಂದು ಮಾರ್ಗನ್ ಸ್ಟಾ್ಯನ್ಲಿ ಹಾಗೂ ಮೂಡೀಸ್ನಂತಹ ರೇಟಿಂಗ್ ಏಜೆನ್ಸಿಗಳು ಅಂದಾಜಿಸಿವೆ. ಆದರೆ ಭೂ-ರಾಜಕೀಯ ಪರಿಣಾಮಗಳು ಇನ್ನೂ ಆಳದ್ದಾಗಬಹುದು. ಟ್ರಂಪ್ ಹೇರಿದ ಸುಂಕವು ಭಾರತ-ಅಮೆರಿಕ ಸಂಬಂಧವನ್ನು ಕೆಡಿಸುವುದು ಮಾತ್ರವಲ್ಲದೆ ಅಮೆರಿಕದ ಏಕಪಕ್ಷೀಯ ಕ್ರಮದಿಂದ ಭೀತಿಗೊಳಗಾದ ರಾಷ್ಟ್ರಗಳ ನಡುವೆ ಹೊಸ ಸಂಬಂಧ ಬೆಸೆಯುವ ವೇಗವರ್ಧಕವಾಗಲಿದೆ. ಭಾರತದ ಮೇಲಿನ ಅಮೆರಿಕ ಒತ್ತಡದಿಂದಾಗಿ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವು ತನ್ನ ವ್ಯೂಹಾತ್ಮಕ ಪ್ರತಿಸ್ಪರ್ಧಿಗಳಾದ ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗುವಂತೆ ಆಗಿದೆ. ಅಮೆರಿಕದ ‘ಸುಂಕಮಾರಿ’ ಧೋರಣೆಯಿಂದಾಗಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ + ಇತರ ಐದು ದೆಶಗಳು) ಮೈತ್ರಿಕೂಟದಲ್ಲಿ ಕೂಡ ಸಂಚಲನ ಮೂಡಿದೆ. ಅಮೆರಿಕದ ವಿರುದ್ಧ ಸೆಟೆದು ನಿಲ್ಲಲು ಅವು ಒಂದುಗೂಡುತ್ತಿವೆ.
ಸುಂಕಾಸ್ತ್ರದಿಂದ ಇತರ ದೇಶಗಳ ಧೋರಣೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಗ್ಗಿಸಲು ಸಾಧ್ಯವಾದೀತೆಂಬ ಅಮೆರಿಕದ ಎಣಿಕೆ ತಲೆಕೆಳಗಾಗಲಿದೆ. ಅಮೆರಿಕದ್ದು ತಪ್ಪು ಲೆಕ್ಕಾಚಾರ ಎನ್ನುವುದು ಭಾರತದ ನೀತಿಯ ಐತಿಹಾಸಿಕ ಹೊರಳುನೋಟ ಪುರಾವೆಯಾಗಿದೆ. ಟ್ರಂಪ್ ಮೊಂಡು ಧೋರಣೆಯು ಅಮೆರಿಕಕ್ಕೇ ತಿರುಗುಬಾಣವಾಗಲಿದೆ. ಅಲ್ಪಕಾಲೀನ ರಾಜಕೀಯ ಲಾಭವು ದೂರಗಾಮಿ ಭೌಗೋಳಿಕ-ರಾಜಕೀಯ ಮತ್ತು ಆರ್ಥಿಕ ಅಸ್ತವ್ಯಸ್ತತೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದೇ ಎನ್ನುವುದು ಅಂತಿಮ ಪರೀಕ್ಷೆಯಾಗಲಿದೆ.
(ಲೇಖಕರು ಮಾಜಿ ರಾಯಭಾರಿ,
ಜಾಗತಿಕ ವಿದ್ಯಮಾನಗಳ ವಿಶ್ಲೇಷಕರು)