

M K Stalin: ಟ್ರಂಪ್ ಭಾರತದ ಮೇಲೆ ವಿಧಿಸಿದ ಹೆಚ್ಚುವರಿ ಸುಂಕದಿಂದ ತಮಿಳುನಾಡಿನ ತಿರಪ್ಪೂರ್ನ ಜವಳಿ ರಪ್ತು ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಸದ್ಯ ಯುರೋಪ್ ಪ್ರವಾಸದಲ್ಲಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲೆ ವಿಧಿಸಿದ ಶೇಕಡಾ 50 ರಷ್ಟು ಸುಂಕದ ವಿರುದ್ಧ ತಿರುಪ್ಪೂರಿನಲ್ಲಿ ಸಾವಿರಾರು ಕಾರ್ಮಿಕರು ಮತ್ತು ರಫ್ತುದಾರರು ಬೃಹತ್ ಪ್ರತಿಭಟನೆ ನಡೆಸಿದ ಕೆಲವೇ ಗಂಟೆಗಳಲ್ಲಿ ಸ್ಟಾಲಿನ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಗುಜರಾತ್ ಸಂಸ್ಕರಣಾಗಾರಗಳಿಗೆ ರಿಯಾಯಿತಿ ದರದಲ್ಲಿ ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಕೇಂದ್ರದ ತರ್ಕವನ್ನು ಪ್ರಶ್ನಿಸಿದ್ದಾರೆ. ಗುಜರಾತ್ ರಾಜ್ಯದ ಲಾಭಕ್ಕಾಗಿ ರಿಯಾಯಿತಿ ದರದಲ್ಲಿ ಕಚ್ಚಾ ತೈಲದ ಖರೀದಿಸುವ ಸಲುವಾಗಿ, ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸುವ ನಮ್ಮ ರಫ್ತುದಾರರು ಬಳಲುತ್ತಿರುವುದನ್ನು ನೀವು ಹೇಗೆ ಅನುಮತಿಸುತ್ತೀರಿ? ತಕ್ಷಣ ಪರಿಹಾರವನ್ನು ಘೋಷಿಸಿ, ಅಮೆರಿಕ ಜೊತೆ ಮಾತುಕತೆ ನಡೆಸಿ, ನೀವು ವಿಶ್ವಗುರು ಎಂಬುದನ್ನು ಸಾಬೀತು ಪಡಿಸಿ ಎಂದು ಕಿಡಿಕಾರಿದ್ದಾರೆ.
ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದ್ದಕ್ಕೆ ದಂಡವಾಗಿ ಟ್ರಂಪ್ ವಿಧಿಸಿದ ಹೆಚ್ಚುವರಿ ಸುಂಕದಿಂದ ಲಕ್ಷಾಂತರ ಕಾರ್ಮಿಕರನ್ನು ನೇಮಿಸಿಕೊಂಡಿರುವ ತಿರುಪ್ಪೂರಿನ ಜವಳಿ ಉದ್ಯಮಕ್ಕೆ ಈಗಾಗಲೇ ಸುಮಾರು 3,000 ಕೋಟಿ ರೂ.ಗಳ ನಷ್ಟವನ್ನುಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸಿಎಂ ಸ್ಟಾಲಿನ್ ಟೀಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ,ಸ್ಟಾಲಿನ್ ಅವರ ಹೇಳಿಕೆಗಳನ್ನು "ಅಪಕ್ವ ಮತ್ತು ದುರದೃಷ್ಟಕರ" ಎಂದಿದೆ. ಒಬ್ಬ ಮುಖ್ಯಮಂತ್ರಿಗೆ ಆರ್ಥಿಕತೆ ಅಥವಾ ರಾಜಕೀಯ ಅರ್ಥವಾಗದಿರುವುದು ಆಶ್ಚರ್ಯಕರ ಎಂದಿದೆ.(ಏಜೆನ್ಸೀಸ್)