

Trump-Zelensky Meet: ರಷ್ಯಾ ಮತ್ತು ಯುಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಎಲ್ಲಾ ಮಹತ್ವದ ಹೆಜ್ಜೆಗಳನ್ನು ಕೈಗೊಳ್ಳಲಾಗಿದೆ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಯತ್ನಗಳನ್ನು ಮೀರಿ, ರಷ್ಯಾ ಮತ್ತು ಯುಕ್ರೇನ್ ನಾಯಕರನ್ನು ನೇರವಾಗಿ ಭೇಟಿ ಮಾಡಿಸಲು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಆ.15ರಂದು ಟ್ರಂಪ್-ಪುಟಿನ್ ಮಾತುಕತೆ ಬಳಿಕ ಇಂದು ಝೆಲೆನ್ಸ್ಕಿ ಜತೆ ಟ್ರಂಪ್ ಮಾತುಕತೆ ನಡೆಸಿದ್ದಾರೆ.
ಇತ್ತೀಚೆಗೆ ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ರನ್ನು ಭೇಟಿಯಾದ ಟ್ರಂಪ್, ಅಮೆರಿಕದ ಶ್ವೇತಭವನದಲ್ಲಿ ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುರೋಪಿಯನ್ ರಾಷ್ಟ್ರಗಳ ನಾಯಕರನ್ನು ಭೇಟಿಯಾದರು. ಸಭೆಯ ನಂತರ, ಯುದ್ಧದ ಅಂತ್ಯಕ್ಕೆ ಸಂಬಂಧಿಸಿದಂತೆ ಟ್ರಂಪ್ ಪ್ರಮುಖ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ.
ಝೆಲೆನ್ಸ್ಕಿ ಜತೆಗಿದ್ದ ಯುರೋಪಿಯನ್ ರಾಷ್ಟ್ರಗಳು, ಈಯು ಮತ್ತು ನಾಟೋ (NATO) ನಾಯಕರ ನಾಯಕರೊಂದಿಗೆ ಓವಲ್ ಕಚೇರಿಯಲ್ಲಿ ನಡೆದ ಸಭೆ ಚೆನ್ನಾಗಿಯೇ ನಡೆಯಿತು ಎಂದು ಟ್ರಂಪ್ ಹೇಳಿದ್ದಾರೆ. ಸುಮಾರು ನಾಲ್ಕು ವರ್ಷಗಳ ಯುದ್ಧವನ್ನು ಕೊನೆಗೊಳಿಸುವತ್ತ ಇದು ಉತ್ತಮ ಹೆಜ್ಜೆಯಾಗಿದೆ. ವಾಷಿಂಗ್ಟನ್ ಸಂಯೋಜಿಸಿದ ಯುರೋಪಿಯನ್ ರಾಷ್ಟ್ರಗಳು ಯುಕ್ರೇನ್‌ಗೆ ಭದ್ರತಾ ಖಾತರಿಗಳನ್ನು ಒದಗಿಸುವ ಅಗತ್ಯತೆಯ ಮೇಲೆ ಚರ್ಚೆಗಳು ಮುಖ್ಯವಾಗಿ ಕೇಂದ್ರೀಕರಿಸಿದವು. ರಷ್ಯಾ-ಯುಕ್ರೇನ್ ನಡುವೆ ಶಾಂತಿ ತರಲಿದ್ದೇವೆ ಎಂಬ ಸಂತೋಷ, ವಿಶ್ವಾಸ ಬಹುತೇಕ ನಾಯಕರಲ್ಲಿ ಮೂಡಿದೆ ಎಂದರು.
ಆದಾಗ್ಯೂ, ಮಾತುಕತೆಯ ಕೊನೆಯಲ್ಲಿ, ನಾನು ಪುಟಿನ್ ಅವರೊಂದಿಗೆ ಫೋನ್ ಕರೆಯಲ್ಲಿ ಮಾತನಾಡಿದೆ. ಝೆಲೆನ್ಸ್ಕಿ ಮತ್ತು ಪುಟಿನ್ ನಡುವೆ ಸಭೆ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಪುಟಿನ್ ಮತ್ತು ಝೆಲೆನ್ಸ್ಕಿ ಶೀಘ್ರದಲ್ಲೇ ಮುಖಾಮುಖಿಯಾಗಿ ಭೇಟಿಯಾಗಲಿದ್ದಾರೆ. ಆದಾಗ್ಯೂ, ಈ ಸಭೆಯ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಅವರ ಭೇಟಿಯ ಬಳಿಕ ನಾನು ಅವರಿಬ್ಬರನ್ನು ಭೇಟಿಯಾಗುತ್ತೇನೆ ಎಂದು ಟ್ರಂಪ್ ಹೇಳಿರುವುದು ಕುತೂಹಲಕಾರಿ ಬೆಳವಣಿಗೆ.
ಶ್ವೇತಭವನದಲ್ಲಿ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಮಾತುಕತೆಗಳು ತುಂಬಾ ರಚನಾತ್ಮಕವಾಗಿದ್ದವು ಎಂದ ಝೆಲೆನ್ಸ್ಕಿ, ಯುದ್ಧವನ್ನು ನಿಲ್ಲಿಸಲು ಮತ್ತು ಜನರ ಜೀವಗಳನ್ನು ಉಳಿಸಲು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಕ್ಕಾಗಿ ಅವರು ಟ್ರಂಪ್‌ಗೆ ಧನ್ಯವಾದಗಳು. ಟ್ರಂಪ್ ಅವರ ಕಲ್ಪನೆಯನ್ನು ನಾವು ಬೆಂಬಲಿಸುತ್ತೇವೆ. ಯಾವುದೇ ರೂಪದಲ್ಲಿ ಪುಟಿನ್ರೊಂದಿಗೆ ಏರ್ಪಡಿಸುವ ಸಭೆಗೆ ನಾವು ಸದಾ ಸಿದ್ಧ. ಮೊದಲ ಸಭೆ ಹೇಗೆ ನಡೆಯುತ್ತದೆ ಎಂಬುದರ ಆಧಾರದ ಮೇಲೆ ರಷ್ಯಾ ಮತ್ತು ಯುಎಸ್ ಜೊತೆಗಿನ ಮುಂದಿನ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸುತ್ತೇವೆ ಎಂದು ಹೇಳಿದ್ದಾರೆ.
ಮುಂದಿನ ಎರಡು ವಾರಗಳಲ್ಲಿ ಝೆಲೆನ್ಸ್ಕಿ ಮತ್ತು ಪುಟಿನ್ ನಡುವೆ ಸಭೆ ನಡೆಸಲು ಟ್ರಂಪ್ ಉದ್ದೇಶಿಸಿದ್ದಾರೆ ಎಂದು ಜರ್ಮನ್ ಕುಲಪತಿ ಫ್ರೆಡ್ರಿಕ್ ಮೆರ್ಜ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಮುಂದಿನ ಎರಡು ವಾರಗಳಲ್ಲಿ ರಷ್ಯಾದ ಅಧ್ಯಕ್ಷ ಮತ್ತು ಯುಕ್ರೇನಿಯನ್ ಅಧ್ಯಕ್ಷರ ನಡುವಿನ ಸಭೆ ನಡೆಯಲಿದೆ ಎಂದು ಟ್ರಂಪ್, ಪುಟಿನ್ ಜತೆಗಿನ ಸಂಭಾಷಣೆಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಫ್ರೆಡ್ರಿಕ್ ಮೆರ್ಜ್ ತಿಳಿಸಿದ್ದಾರೆ.
ಶ್ವೇತಭವನದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಫಿನ್ನಿಷ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್, ಇಟಾಲಿಯನ್ ಪ್ರಧಾನಿ ಜಾರ್ಜಿ ಮೆಲೋನಿ, ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್, ಜರ್ಮನ್ ಕುಲಪತಿ ಫ್ರೆಡ್ರಿಕ್ ಮೆರ್ಜ್, ಯುರೋಪಿಯನ್ ಕಮಿಷನ್ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಉಪಸ್ಥಿತರಿದ್ದರು,(ಏಜೆನ್ಸೀಸ್).