

Trump Tariffs: ಯುಕ್ರೇನ್ ಮೇಲಿನ ನಿರಂತರ ಯುದ್ಧವನ್ನು ಕೈಬಿಡುವಂತೆ ಈಗಾಗಲೇ ರಷ್ಯಾಗೆ ಗಡುವು ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ರಷ್ಯಾ ಸೊಕ್ಕನ್ನು ಅಡಗಿಸಲು ಭಾರತವನ್ನು ಟಾರ್ಗೆಟ್ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತನ್ನ ಎದುರಾಳಿ ರಷ್ಯಾವನ್ನು ಕೈಬೊಂಬೆಯಾಗಿ ಮಾಡಿಕೊಳ್ಳಲು ಟ್ರಂಪ್ ಮಾಡಿದ ಯಾವ ಕಸರತ್ತು ಕೂಡ ಫಲಿಸಿಲ್ಲ. ಇದು ಅವರನ್ನು ಇನ್ನಷ್ಟು ಕೆರಳಿಸಿದೆ.
ಯುಕ್ರೇನ್ ವಿರುದ್ಧ ನಿರಂತರ ಯುದ್ಧ ದಾಳಿ ನಡೆಸುತ್ತಿರುವ ರಷ್ಯಾ, ನಾವು ಕೊಟ್ಟಿರುವ ಡೆಡ್ಲೈನ್ ಒಳಗೆ ಯುದ್ಧವನ್ನು ಕೈಬಿಡಬೇಕು. ಇಲ್ಲದೇ ಹೋದರೆ ಬಹಳ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾದಿತು ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಆದರೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ತಾವು ಯುದ್ಧವನ್ನು ನಿಲ್ಲಿಸುವುದಿಲ್ಲ ಮತ್ತು ಈ ಸುಂಕ ಸಮರಕ್ಕೆಲ್ಲ ಬೆದರುವುದಿಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟಾಗಿರುವ ಟ್ರಂಪ್, ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಮುಂದಿನ ದಿನಗಳಲ್ಲಿ ತೈಲ ಆಮದನ್ನು ಇಲ್ಲಿದೆ ಕೊನೆಗೊಳಿಸಬೇಕು ಎಂದು ಎಚ್ಚರಿಸಿದ್ದಾರೆ.
ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದ ಭಾರತ, ಆಮದು ಮಾಡಿಕೊಳ್ಳುವುದನ್ನು ಎಂದಿನಂತೆ ಮುಂದುವರಿಸಿದೆ. ಈ ಮೂಲಕ ರಷ್ಯಾ ಜೊತೆಗಿನ ತನ್ನ ಒಡನಾಟವನ್ನು ಭಾರತ ಎತ್ತಿಹಿಡಿದಿದೆ. ಇದು ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರತಕ್ಕೆ ಶೇ.25ರಷ್ಟು ಸುಂಕದ ಜೊತೆಗೆ ದಂಡವನ್ನು ವಿಧಿಸಿದರು. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವಂತೆ ಯಾವುದೇ ಸೂಚನೆಗಳನ್ನು ನೀಡಿಲ್ಲ ಮತ್ತು ಖರೀದಿಗಳನ್ನು ನಿಲ್ಲಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ಕೂಡ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.