ಸುಂಕದ 'ಹೊರೆ', ಮಸ್ಕ್​ ಟ್ರಂಪ್​ 'ಮೊರೆ'; ವಿಶ್ವದ ದೊಡ್ಡಣ್ಣನ ಜತೆಗೆ ಟೆಸ್ಲಾ ಮಾಲೀಕ ಚರ್ಚೆ | Elon Musk

ವಿಜಯವಾಣಿ - 2025-04-08T204109.525
Published on

Elon Musk: ಕಡೆಗೂ ತಾನು ಹೇಳಿದಂತೆಯೇ ಮಾಡಿ ತೋರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ತಮ್ಮ ಸುಂಕ ಪರಿಣಾಮದ ಮೂಲಕ ಇಡೀ ಜಗತ್ತಿಗೆ ದೊಡ್ಡ ಶಾಕ್ ನೀಡಿರುವುದು ಇದೀಗ ಷೇರು ಪೇಟೆಯನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ಪಾರಸ್ಪರಿಕ ತೆರಿಗೆ ಹೆಸರಿನಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಬರೆ ಎಳೆದ ಟ್ರಂಪ್​, ಇದೀಗ ದೊಡ್ಡ ಬದಲಾವಣೆಗೆ ಕಾರಣರಾಗಿದ್ದಾರೆ.

ವಿವಿಧ ದೇಶಗಳ ಮೇಲೆ ತೆರಿಗೆ ಬಾಂಬ್​ ಹಾಕಿರುವ ಟ್ರಂಪ್​, ವಿದೇಶಿ ಉತ್ಪನ್ನಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದ್ದಾರೆ. ಭಾರತೀಯ ಉತ್ಪನ್ನಗಳ ಮೇಲೆ ಶೇ. 26ರಷ್ಟು ಸುಂಕ ವಿಧಿಸಿದ್ದಾರೆ. ಎಲ್ಲ ದೇಶಗಳಿಂದ ಆಮದು ಮಾಡಿಕೊಳ್ಳುವ ಆಟೋಮೊಬೈಲ್‌ಗಳ ಮೇಲೆ ಶೇ. 25ರಷ್ಟು ಸುಂಕ ವಿಧಿಸುವುದಾಗಿಯೂ ಘೋಷಿಸಿದ್ದಾರೆ. ಸದ್ಯ ಇದೇ ಈಗ ದೊಡ್ಡ ತಲೆನೋವಿಗೆ ಕಾರಣವಾಗಿದೆ.

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಚೀನಾದ ಆಮದುಗಳ ಮೇಲೆ ವಿಧಿಸಲಾದ ಹೊಸ ಸುಂಕಗಳನ್ನು ಹಿಂಪಡೆಯುವಂತೆ ಡೊನಾಲ್ಡ್ ಟ್ರಂಪ್​ರನ್ನು ವೈಯಕ್ತಿಕವಾಗಿ ಕೇಳಿಕೊಂಡಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಚೀನಾದ ಸರಕುಗಳ ಮೇಲೆ ಶೇ.50ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಜಾಗತಿಕ ಬಿಲಿಯನೇರ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಹೊಸ ಸುಂಕ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮಸ್ಕ್ ಸ್ವತಃ ಟ್ರಂಪ್‌ಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತೀಕಾರದ ಸುಂಕವನ್ನು ಹಿಂತೆಗೆದುಕೊಳ್ಳದಿದ್ದರೆ ಅದರ ಮೇಲೆ ಹೆಚ್ಚುವರಿ ಶೇ.50ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಚೀನಾಕ್ಕೆ ಎಚ್ಚರಿಕೆ ನೀಡಿದೆ. ಅಮೆರಿಕದ ಈ ಘೋಷಣೆಯ ಬೆನ್ನಲ್ಲೇ ಜಾಗತಿಕ ವ್ಯಾಪಾರ ಯುದ್ಧದ ಸಾಧ್ಯತೆಗಳು ಮತ್ತೊಮ್ಮೆ ಹೆಚ್ಚಿವೆ. ಅಮೆರಿಕದ ಇತ್ತೀಚಿನ ಘೋಷಣೆಯ ವಿರುದ್ಧ ಮಸ್ಕ್ ಕೂಡ ಧ್ವನಿ ಎತ್ತಿದ್ದಾರೆ. ಸುಂಕ ಹೆಚ್ಚಳವನ್ನು ನಿಲ್ಲಿಸಲು ಮಸ್ಕ್ ಟ್ರಂಪ್ ಜತೆ ನೇರಾ ನೇರ ಮಾತುಕತೆ ನಡೆಸಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದಾಗ್ಯೂ, ಮಸ್ಕ್ ಅವರ ಪ್ರಯತ್ನಗಳು ವಿಫಲವಾಗಿವೆ ಎನ್ನಲಾಗಿದೆ.

ಮಸ್ಕ್ ಅವರ ಹೋರಾಟ ಇದೇ ಮೊದಲಲ್ಲ

ವ್ಯಾಪಾರ ಕುರಿತಂತೆ ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಘರ್ಷಣೆ ನಡೆಸುತ್ತಿರುವುದು ಇದೇ ಮೊದಲಲ್ಲ. 2020ರಲ್ಲಿ ಟ್ರಂಪ್ ಅವರ ಸುಂಕಗಳನ್ನು ಪ್ರಶ್ನಿಸಿ ಮಸ್ಕ್ ಮೊಕದ್ದಮೆ ಹೂಡಿದಾಗ ಇಬ್ಬರ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಸುಂಕಗಳ ವಿರುದ್ಧ ಮಸ್ಕ್ ಅವರ ಹೋರಾಟವು ಹಲವು ವರ್ಷಗಳ ಹಿಂದಿನದು. ಚೀನಾದಿಂದ ಆಮದು ಮಾಡಿಕೊಳ್ಳುವ ಭಾಗಗಳ ಮೇಲಿನ ಸುಂಕಗಳ ಕುರಿತು ಟೆಸ್ಲಾ 2020ರಲ್ಲಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡಿದ್ದರು. ಈ ನೀತಿಯನ್ನು ಅನ್ಯಾಯವೆಂದು ಕರೆದಿದ್ದ ಮಸ್ಕ್, ಆರಂಭದಲ್ಲಿ ಮೊಕದ್ದಮೆಯನ್ನು ಬೆಂಬಲಿಸಿದರು. ಆದಾಗ್ಯೂ, ಚೀನಾದೊಂದಿಗೆ ಒಪ್ಪಂದದಂತೆ ಕಾಣುವ ಭಯದಿಂದ ಮಸ್ಕ್ ಹಿಂಜರಿದರು ಎಂದು ವರದಿ ಉಲ್ಲೇಖಿಸಿದೆ.

ಟೆಸ್ಲಾ ಷೇರುಗಳು ತೀವ್ರ ಕುಸಿತ

ಡೊನಾಲ್ಡ್ ಟ್ರಂಪ್ ಜಾರಿಗೆ ತಂದ ಹೊಸ ಸುಂಕ ನೀತಿಯು ವಿಶ್ವಾದ್ಯಂತ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಪ್ರಪಂಚದಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಅವ್ಯವಸ್ಥೆ ಇದೆ. ಟ್ರಂಪ್ ಕಟು ನಿರ್ಧಾರವು ಅಮೆರಿಕದ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಅಧ್ಯಕ್ಷರ ಈ ನಿರ್ಧಾರವು, ನಿರ್ದಿಷ್ಟವಾಗಿ, ಎಲೋನ್ ಮಸ್ಕ್ ಅವರ ಎಲೆಕ್ಟ್ರಿಕ್ ಕಾರು ಕಂಪನಿ ಟೆಸ್ಲಾ ಷೇರುಗಳಲ್ಲಿ ಭಾರಿ ಕುಸಿತಕ್ಕೆ ಕಾರಣವಾಗಿದೆ. ಟೆಸ್ಲಾ ಷೇರುಗಳು ಶೇ. 2.5ಕ್ಕಿಂತ ಹೆಚ್ಚು ಕುಸಿದು 233.29 ಡಾಲರ್​ಗೆ ಮುಕ್ತಾಯಗೊಂಡಿದೆ. ಈ ವರ್ಷದ ಆರಂಭದಿಂದ ಕಂಪನಿಯ ಮೌಲ್ಯವು ಶೇ.38ಕ್ಕಿಂತ ಹೆಚ್ಚು ಕುಸಿದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net