

Trump: ಯುಕ್ರೇನ್ ಬಿಕ್ಕಟ್ಟಿನ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿಲುವನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
"ಪುಟಿನ್ರ ವರ್ತನೆಯಿಂದ ನಾನು ತೀವ್ರ ಬೇಸರಗೊಂಡಿದ್ದೇನೆ. ಬೆಳಗ್ಗೆ ಬಹಳ ಚೆನ್ನಾಗಿ ಮಾತನಾಡ್ತಾರೆ, ಅದೇ ರಾತ್ರಿ ಬಾಂಬ್ ಹಾಕಿರುತ್ತಾರೆ. ಅವರು ಶಾಂತಿ ಕುರಿತಾಗಿ ನಿಲುವು ತೆಗೆದುಕೊಳ್ಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ರಾತ್ರೋರಾತ್ರಿ ಯುಕ್ರೇನ್ ಮೇಲೆ ದಾಳಿ ಮಾಡುತ್ತಿರುವುದು ನನಗೆ ಸ್ವಲ್ಪವು ಹಿಡಿಸುತ್ತಿಲ್ಲ" ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷರು ಮತ್ತು ಪುಟಿನ್ ಆಗಾಗ್ಗೆ ದೂರವಾಣಿ ಕರೆಯಲ್ಲಿ ಮಾತನಾಡುತ್ತಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಹೇಳಿವೆ.
ರಷ್ಯಾ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ. ಅಮೆರಿಕದ ಸೆನೆಟರ್‌ಗಳು ಈಗಾಗಲೇ ರಷ್ಯಾದ ಮೇಲೆ ಕಠಿಣ ನಿರ್ಬಂಧಗಳ ಮಸೂದೆಯನ್ನು ಪ್ರಸ್ತಾಪಿಸಿದ್ದಾರೆ. ಇದಲ್ಲದೆ, ಈ ಮಸೂದೆಯು ರಷ್ಯಾದ ಮೇಲೆ ನಿರ್ಬಂಧಗಳನ್ನು ವಿಧಿಸಲು ಟ್ರಂಪ್‌ಗೆ ವಿಶಾಲ ಅಧಿಕಾರವನ್ನು ನೀಡುತ್ತದೆ ಎಂದು ತೋರಿದೆ.
ಇತ್ತೀಚಿನ ಘಟನೆಯು ವಿಶ್ವ ರಾಜಕೀಯದಲ್ಲಿ ಒಂದು ಮಹತ್ವದ ತಿರುವು ಪಡೆಯುವ ಸಾಧ್ಯತೆಯಿದೆ. ವಿಶೇಷವಾಗಿ ಅಮೆರಿಕ-ರಷ್ಯಾ ಸಂಬಂಧಗಳಲ್ಲಿ ಇದು ಒಂದು ಮಹತ್ವದ ತಿರುವು ಎಂದೇ ಪರಿಗಣಿಸಲಾಗಿದೆ. ಯುಕ್ರೇನ್-ರಷ್ಯಾ ಉದ್ವಿಗ್ನತೆಯ ಸಂದರ್ಭದಲ್ಲಿ ಟ್ರಂಪ್ ಆಡುತ್ತಿರುವ ಮಾತುಗಳು ಮತ್ತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ರಷ್ಯಾದ ಮೇಲೆ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಈ ಮಧ್ಯೆ ರಷ್ಯಾ-ಯುಕ್ರೇನ್ ಮೇಲೆ ನಡೆಯುತ್ತಿರುವ ದಾಳಿಗಳ ಹಿನ್ನೆಲೆಯಲ್ಲಿ ಪೇಟ್ರಿಯಾಟ್ ವಾಯು ರಕ್ಷಣಾ ಕ್ಷಿಪಣಿಗಳನ್ನು ಒದಗಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಈ ಶಸ್ತ್ರಾಸ್ತ್ರಗಳ ವೆಚ್ಚವನ್ನು ಅಮೆರಿಕ ಭರಿಸುವುದಿಲ್ಲ ಮತ್ತು ಯುರೋಪಿಯನ್ ಒಕ್ಕೂಟವು ಶೇ.100ರಷ್ಟು ಪಾವತಿಸುತ್ತದೆ ಎಂದು ಅಧ್ಯಕ್ಷರು ಹೇಳಿದ್ದಾರೆ. ಇದು ಕೇವಲ ವ್ಯವಹಾರ ಎಂದಿರುವುದು ನಿಜಕ್ಕೂ ಗಮನಾರ್ಹವೇ ಸರಿ,(ಏಜೆನ್ಸೀಸ್).