ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್‌

america army
Published on

ವಾಷಿಂಗ್ಟನ್‌: ಭಾರತ ಮತ್ತು ಚೀನಾ ನಡುವಿನ ಸಂಘರ್ಷ ತಾರಕ್ಕೇರುತ್ತಲೇ ಇದೆ. ಇದಾಗಲೇ ಭಾರತ ಮಾತ್ರವಲ್ಲದೇ ಹಲವು ದೇಶಗಳಿಂದಲೂ ಕುತಂತ್ರಿ ಚೀನಾ ಪೆಟ್ಟು ತಿನ್ನುತ್ತಲೇ ಬಂದಿದೆ.

ಇದೀಗ ಅಮೆರಿಕ ಒಂದು ಹೇಳಿಕೆ ನೀಡಿದ್ದು, ಭಾರತ-ಚೀನಾ ನಡುವಿನ ಸಂಘರ್ಷದಲ್ಲಿ ಅಮೆರಿಕದ ಸೇನೆಯು ಭಾರತದ ಬೆಂಬಲಕ್ಕೆ ನಿಲ್ಲಲಿದೆ ಎಂದಿದೆ. ಅಮೆರಿಕದ ಶ್ವೇತಭವನದ ಚೀಫ್‌ ಆಫ್‌ ಸ್ಟಾಫ್‌ ಮಾರ್ಕ್ ಮೆಡೋಸ್‌ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

ಭಾರತಕ್ಕೆ ಬೆಂಬಲ ನೀಡಲು ದಕ್ಷಿಣ ಚೀನಾ ಸಮುದ್ರಕ್ಕೆ ಅಮೆರಿಕದ ಸೇನಾಪಡೆಯು ಎರಡು ಏರ್‌ಕ್ರಾಫ್ಟ್‌ ಕ್ಯಾರಿಯರ್‌ಗಳನ್ನು (ಯುದ್ಧವಿಮಾನಗಳನ್ನು ಹೊತ್ತ ಹಡಗು) ಕಳುಹಿಸಿದ ಬೆನ್ನಲ್ಲೇ ಅಮೆರಿಕ ನೀಡಿರುವ ಈ ಹೇಳಿಕೆ ಮಹತ್ವ ಪಡೆದಿದೆ.

ಚೀನಾದ ಸೈನಿಕರು ಕಳೆದ ತಿಂಗಳು ಗಡಿಯಲ್ಲಿ ಭಾರತದ ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಭಾರತವು ಚೀನಾದ ಆ್ಯಪ್‌ಗಳನ್ನು ನಿಷೇಧ ಮಾಡಿದೆ. ಈ ಬೆಳವಣಿಗೆಯಲ್ಲಿ ಅಮೆರಿಕದ ನಿಲುವೇನು ಎಂಬ ಪ್ರಶ್ನೆಗೆ ಮಾತನಾಡಿದ ಮೆಡೋಸ್‌, ನಮ್ಮ ಸೇನೆ ಬಲಿಷ್ಠವಾಗಿದೆ. ಇದು ಹೀಗೆಯೇ ಬಲಿಷ್ಠವಾಗಿ ಮುಂದುವರೆಯುತ್ತದೆ. ಜಗತ್ತಿನಲ್ಲಿ ಎಲ್ಲೇ ಆಗಲಿ, ಯಾರೇ ಆಗಲಿ, ಸೇನಾ ಪ್ರಾಬಲ್ಯ ಮೆರೆಯಲು ಬಂದರೆ ಅದನ್ನು ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.

ಇದೇ ವೇಳೆ, ಚೀನಾಕ್ಕೆ ಸಂಬಂಧಿಸಿದಂತೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶೀಘ್ರದಲ್ಲಿ ಹೊಸ ಆದೇಶವೊಂದನ್ನು ಹೊರಡಿಸಲಿದ್ದಾರೆ ಎಂಬ ಸುಳಿವು ನೀಡಿದರು.

‘ನಮ್ಮ ಸಂದೇಶ ಸ್ಪಷ್ಟವಾಗಿದೆ. ಚೀನಾ ಇರಲಿ ಅಥವಾ ಇನ್ನಾರೇ ಇರಲಿ, ದಕ್ಷಿಣ ಏಷ್ಯಾದಲ್ಲಾಗಲೀ ಅಥವಾ ಇನ್ನೆಲ್ಲೇ ಆಗಲಿ, ಸೇನಾ ಪ್ರಾಬಲ್ಯ ಮೆರೆಯಲು ಬಂದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಭಾರತದ ಪರ ನಾವಿದ್ದೇವೆ’ ಎಂದು ಮೆಡೋಸ್‌ ಹೇಳಿದರು.

ದಕ್ಷಿಣ ಚೀನಾಕ್ಕೆ ನಾವು ಎರಡು ಯುದ್ಧನೌಕೆಗಳನ್ನು ಕಳುಹಿಸಿದ್ದೇವೆ. ಜಗತ್ತಿನಲ್ಲಿ ಈಗಲೂ ನಮ್ಮದು ಪ್ರಬಲ ಮಿಲಿಟರಿ ಶಕ್ತಿಯಾಗಿದೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಮೆರಿಕದ ಸೇನಾಪಡೆಗೆ ಸಾಕಷ್ಟುಬಲ ತುಂಬಿದ್ದಾರೆ. ಅದು ಕೇವಲ ಹಾರ್ಡ್‌ವೇರ್‌ ರೂಪದಲ್ಲಿ ಅಲ್ಲ, ಸಾಕಷ್ಟು ಹೊಸ ಸೈನಿಕರನ್ನೂ ತಯಾರು ಮಾಡಿದ್ದಾರೆ. ಇದು ಹೀಗೇ ಮುಂದುವರೆಯುತ್ತದೆ ಎಂದೂ ಹೇಳಿದರು.

‘ದಕ್ಷಿಣ ಚೀನಾ ಸಮುದ್ರದಲ್ಲಿ ತೈವಾನ್‌ ಅಥವಾ ಬೇರೆ ಯಾವುದೇ ದೇಶದ ವಿರುದ್ಧ ಚೀನಾ ದುಸ್ಸಾಹಸ ಮೆರೆದರೆ ಅದನ್ನು ಎದುರಿಸಲೆಂದೇ ಅಮೆರಿಕ ಎರಡು ಯುದ್ಧನೌಕೆಗಳನ್ನು ಈಗಾಗಲೇ ಕಳುಹಿಸಿದೆ.ಚೀನಾದ ಗಡಿಯಲ್ಲಿರುವ ಯಾವ ದೇಶವೂ ಸದ್ಯ ಸುರಕ್ಷಿತವಾಗಿಲ್ಲ. ಆ ಎಲ್ಲ ದೇಶಗಳಿಗೂ ಅಮೆರಿಕದ ಜೊತೆಗೆ ಸಂಬಂಧ ಬೇಕಿದೆ. ನಾವು ಆ ಸಂಬಂಧ ಇರಿಸಿಕೊಳ್ಳುತ್ತೇವೆ’ ಎಂದು ಅಮೆರಿಕದ ಪ್ರಭಾವಿ ರಿಪಬ್ಲಿಕನ್‌ ಸಂಸದ ಟಾಮ್‌ ಕಾಟನ್‌ ಹೇಳಿರುವುದು ಇಲ್ಲಿ ಉಲ್ಲೇಖಾರ್ಹ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net