

ವಾಷಿಂಗ್ಟನ್: ಅಧಿಕಾರ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮಹಾಭಿಯೋಗ ವಿಫಲವಾಗಿದ್ದು, ಈ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಟ್ರಂಪ್ಗೆ ಬಲ ಬಂದಂತಾಗಿದೆ. ಟ್ರಂಪ್ ವಿರುದ್ಧದ ಆರೋಪ ಕುರಿತು ಸೆನೆಟ್ನಲ್ಲಿ (ಅಮೆರಿಕ ಸಂಸತ್ನ ಮೇಲ್ಮನೆ) ಸುಮಾರು ಮೂರು ವಾರ ನಡೆದ ವಿಚಾರಣೆ ಬುಧವಾರ ನಿರ್ಣಾಯಕ ಹಂತಕ್ಕೆ ಬಂತು. ಅಧಿಕಾರ ದುರುಪಯೋಗ ಆರೋಪ ಕುರಿತು 52 ಸಂಸದರು ಟ್ರಂಪ್ ಪರವಾಗಿ ಮತ್ತು 48 ಮಂದಿ ವಿರುದ್ಧವಾಗಿ
ಮತಚಲಾವಣೆ ಮಾಡಿದರು. ಕಾಂಗ್ರೆಸ್ನ ಕಾರ್ಯಚಟುವಟಿಕೆಗೆ ತಡೆಹಾಕಿದ ಆಪಾದನೆ ಬಗ್ಗೆ ನಡೆದ ಮತದಾನದಲ್ಲಿ ಟ್ರಂಪ್ ಪರ 53 ಮತ್ತು ವಿರುದ್ಧ 47 ಮತಗಳು ದಾಖಲಾದವು. ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್, ಅಧ್ಯಕ್ಷರ ವಿರುದ್ಧದ ಆರೋಪಗಳು ಬಿದ್ದುಹೋಗಿವೆ ಎಂದು ರೂಲಿಂಗ್ ನೀಡಿದರು.
ಸೆನೆಟ್ ಬಲಾಬಲ
ರಿಪಬ್ಲಿಕನ್- 53
ಡೆಮಾಕ್ರಟಿಕ್- 45
ಇತರರು- 02
ಒಟ್ಟು- 100
ಅಮೆರಿಕದ 4ನೇ ಅಧ್ಯಕ್ಷ
ಟ್ರಂಪ್ ಮಹಾಭಿಯೋಗ ಎದುರಿಸಿದ ನಾಲ್ಕನೇ ಅಧ್ಯಕ್ಷ. 1974ರಲ್ಲಿ ರಿಚರ್ಡ್ ನಿಕ್ಸಿನ್ ಮಹಾಭಿಯೋಗಕ್ಕೆ ಗುರಿಯಾಗಿ ಅದು ಮಂಡನೆಯಾಗುವುದಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದರು. 1868ರಲ್ಲಿ ಆಂಡ್ರೊ ಜಾನ್ಸನ್ ಮತ್ತು 1999ರಲ್ಲಿ ಬಿಲ್ ಕ್ಲಿಂಟನ್ ವಿರುದ್ಧ ಮಹಾಭಿಯೋಗ ಮಂಡನೆಯಾಗಿತ್ತು. ಆದರೆ, ಅದಕ್ಕೆ ಸೆನೆಟ್ನಲ್ಲಿ ಸೋಲುಂಟಾಗಿತ್ತು.
ಅಪ್ರಾಮಾಣಿಕರು ಮತ್ತು ಭ್ರಷ್ಟರು ಮಾಡಿದ್ದ ಆರೋಪದಿಂದ ಭಯಾನಕ ಅಗ್ನಿಪರೀಕ್ಷೆಗೆ ಒಳಗಾಗಿದ್ದೆ. ನನ್ನನ್ನು ರಾಜಕೀಯವಾಗಿ ಸರ್ವನಾಶ ಮಾಡಲು ವಿರೋಧಿಗಳು ಎಲ್ಲ ಪ್ರಯತ್ನವನ್ನು ಮಾಡಿ, ಈ ದೇಶದ ಮೇಲೆ ದೊಡ್ಡ ಘಾಸಿ ಮಾಡಿದ್ದಾರೆ. | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ
ಆರೋಪ ಏನು?
ಡೆಮಾಕ್ರಟಿಕ್ ಮುಖಂಡ, ಮಾಜಿ ಉಪಾಧ್ಯಕ್ಷ ಜೋ ಬಿಡೆನ್ 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅವರನ್ನು ಹಗರಣದಲ್ಲಿ ಸಿಲುಕಿಸಲು ಅಧ್ಯಕ್ಷ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕಿ ಮೇಲೆ ಪ್ರಭಾವ ಬೀರಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಮತ್ತು ಕಾಂಗ್ರೆಸ್ನ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂಬುದು ಮಹಾಭಿಯೋಗಕ್ಕೆ ಪ್ರಮುಖ ಕಾರಣ. ಜೋ ಬಿಡೆನ್ ಮತ್ತು ಅವರ ಪುತ್ರ ಹಂಟರ್ ಬಿಡೆನ್ ಉಕ್ರೇನ್ನಲ್ಲಿ ಉದ್ಯಮ ಹೊಂದಿದ್ದಾರೆ. ಈ ಉದ್ಯಮಗಳಲ್ಲಿ ಅವ್ಯವಹಾರ ನಡೆದಿದೆ ಎಂದು ತನಿಖೆ ನಡೆಸುವಂತೆ ಟ್ರಂಪ್ ಉಕ್ರೇನ್ ಅಧ್ಯಕ್ಷರ ಮೇಲೆ ಒತ್ತಡ ತಂದಿದ್ದರು. ಈ ಕೆಲಸ ಮಾಡದಿದ್ದರೆ ಅಮೆರಿಕದ ಮಿಲಿಟರಿ (ಸುಮಾರು 400 ಮಿಲಿಯನ್ ಡಾಲರ್) ನೆರವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.