ಏನಿದು 'ಟ್ರಂಪ್​-ಪುಟಿನ್'​ ಸುರಂಗ? ಅಮೆರಿಕ-ರಷ್ಯಾ ಸಂಪರ್ಕಕ್ಕೆ ಮಸ್ಕ್​ ಸಂಸ್ಥೆ ಸೇತುವೆ? ಹೀಗಿದೆ ವರದಿ | Trump-Putin

ವಿಜಯವಾಣಿ (79)
Published on

ಅಮೆರಿಕ: ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವ ಒಂದೇ ಒಂದು ವಿಚಾರಕ್ಕೆ ಸಿಡಿಮಿಡಿಗೊಂಡಿದ್ದ ಅಮೆರಿಕ, ಇಂಡಿಯಾ ಮೇಲೆ ಹೆಚ್ಚುವರಿ ಸುಂಕ ಸಮರ ಸಾರಿತ್ತು (Trump-Putin). ಇದರೊಟ್ಟಿಗೆ ಪುಟಿನ್ ರಾಷ್ಟ್ರವು, ಯುಕ್ರೇನ್​ ಮೇಲೆ ನಡೆಸುತ್ತಿರುವ ಯುದ್ಧವನ್ನು ಕೈಬಿಡಬೇಕು ಎಂದು ಟ್ರಂಪ್​ ಎಚ್ಚರಿಕೆಯನ್ನೂ ರವಾನಿಸಿದ್ದರು. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಯುಎಸ್​ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖಾಮುಖಿ ಭೇಟಿಯಾಗಿ ಮಾತುಕತೆ ನಡೆಸಿದ್ದರೂ ಯಾವುದೇ ಪ್ರಯೋಜನಗಳು ಎರಡು ದೇಶಕ್ಕೆ ಲಭಿಸಿಲ್ಲ. ಹೀಗಿರುವಾಗಲೇ ಹೊಸ ವಿಷಯವೊಂದು ಮುನ್ನೆಲೆಗೆ ಬಂದಿದ್ದು, ಹಲವರ ಗಮನವನ್ನು ಸೆಳೆದಿದೆ. ​

ಎಲಾನ್ ಮಸ್ಕ್ ಮುಂದಾಳತ್ವದ ಬೋರಿಂಗ್ ಕಂಪನಿಗೆ ರಷ್ಯಾ-ಅಮೆರಿಕವನ್ನು ಸಂಪರ್ಕಿಸುವ ಬೃಹತ್ ಸಮುದ್ರದೊಳಗಿನ ರೈಲ್ವೆ ಸುರಂಗವನ್ನು ನಿರ್ಮಿಸುವ ಅವಕಾಶವನ್ನು ನೀಡಿರುವ ರಷ್ಯಾ ಪ್ರಸ್ತಾಪವನ್ನು ಟ್ರಂಪ್​ ಆಸಕ್ತಿದಾಯಕ ಎಂದಿದ್ದಾರೆ. ಆದರೆ, ಅದರ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದು ಇಲ್ಲಿ ಗಮನಾರ್ಹ.

ರಷ್ಯಾದ ದೃಷ್ಟಿಕೋನ ಏನು?

ರಷ್ಯಾದ ರಾಯಭಾರಿ ಕಿರಿಲ್ ಡಿಮಿಟ್ರಿವ್ ಈ ಯೋಜನೆಯನ್ನು "ಏಕತೆಯನ್ನು ಸಂಕೇತಿಸುವ 70 ಮೈಲಿ ಲಿಂಕ್" ಎಂದು ಬಣ್ಣಿಸಿದ್ದಾರೆ. ಇದು ಕೇವಲ ಸಾರಿಗೆ ಮಾರ್ಗವಲ್ಲ. ಬದಲಿಗೆ ಭೌಗೋಳಿಕವಾಗಿ ನಿರ್ಣಾಯಕ ಸಂಪರ್ಕವಾಗುತ್ತದೆ ಎಂದಿದ್ದಾರೆ. ರಷ್ಯಾದ ಪ್ರಸ್ತಾವನೆಯ ಪ್ರಕಾರ, ಸುರಂಗವು ಸುಮಾರು 65 ಬಿಲಿಯನ್ ಡಾಲರ್​ (ಅಂದರೆ ಸುಮಾರು 5 ಲಕ್ಷ ಕೋಟಿ ರೂ.) ವೆಚ್ಚವಾಗಲಿದೆ. ಆದಾಗ್ಯೂ, ಮಸ್ಕ್ ಅವರ ಬೋರಿಂಗ್ ಕಂಪನಿಯೇ ಈ ಸುರಂಗ ಮಾರ್ಗದ ಕೆಲಸವನ್ನು ಪೂರ್ಣಗೊಳಿಸಲು ರಷ್ಯಾ ತಿಳಿಸಿದೆ. ಅದಕ್ಕೆ 8 ಬಿಲಿಯನ್ ಡಾಲರ್​ ವರೆಗೆ ವೆಚ್ಚವನ್ನು ಕಡಿತಗೊಳಿಸಬಹುದು ಮತ್ತು ಎಂಟೇ ವರ್ಷಗಳಲ್ಲಿ ಕೆಲಸವನ್ನು ಪೂರ್ಣಗೊಳಿಸಬಹುದು ಎಂದು ಹೇಳಿದೆ.

ಈ ಯೋಜನೆಗೆ ಯುಕ್ರೇನ್‌ ಅಸಮಾಧಾನ

ಯುಕ್ರೇನ್​ ಬೆನ್ನಿಗೆ ನಿಂತಿರುವ ಟ್ರಂಪ್, ರಷ್ಯಾ ನೀಡಿರುವ ಈ ಪ್ರಸ್ತಾವನೆಗೆ ಪಾಸಿಟಿವ್​ ಪ್ರತಿಕ್ರಿಯೆ ನೀಡಿರುವ ಬಗ್ಗೆ ಯುಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನೇತೃತ್ವದ ತಂಡವು, ಶೀಘ್ರವೇ ಯೋಜನೆಗೆ ಸಂಬಂಧಿಸಿದಂತೆ ರಷ್ಯಾದ ಪ್ರತಿನಿಧಿಗಳನ್ನು ಭೇಟಿ ಮಾಡಲಿದೆ ಎಂಬ ಸುದ್ದಿ ಕುತೂಹಲ ಮೂಡಿಸಿದೆ. ಇದಾದ ಬಳಿಕ ಹಂಗೇರಿಯಲ್ಲಿ ಪುಟಿನ್ ಮತ್ತು ಟ್ರಂಪ್ ನಡುವೆ ಸಭೆ ನಡೆಯಲಿದೆ.

ಇದು ಕಠಿಣ ಯೋಜನೆ?

ತಜ್ಞರ ಪ್ರಕಾರ, ಬೇರಿಂಗ್ ಜಲಸಂಧಿಯಲ್ಲಿ ಸುರಂಗ ನಿರ್ಮಾಣವು ಅತ್ಯಂತ ಕಷ್ಟಕರವಾದ ಯೋಜನೆ ಎನ್ನಲಾಗಿದೆ. ತೀವ್ರ ಶೀತದ ವಾತಾವರಣ, ಮೂಲಸೌಕರ್ಯಗಳ ಕೊರತೆ ಮತ್ತು ಆಗಾಗ್ಗೆ ಉಂಟಾಗುವ ಭೂಕಂಪನಗಳು ನಿರ್ಮಾಣಕ್ಕೆ ಪ್ರಮುಖ ಅಡೆತಡೆಗಳಾಗಿವೆ. ಬೋರಿಂಗ್ ಕಂಪನಿಯು ಈ ಮೊದಲು ಅಂತಹ ಪರಿಸ್ಥಿತಿಗಳಲ್ಲಿ ಎಂದಿಗೂ ಕೆಲಸ ಮಾಡಿಲ್ಲ!

ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸಂಸ್ಥೆಗಳು ರಷ್ಯಾದೊಂದಿಗೆ ಹಲವಾರು ವ್ಯವಹಾರಗಳನ್ನು ಮಾಡುತ್ತಿವೆ. 2022ರಲ್ಲಿ ಮಸ್ಕ್ ಪುಟಿನ್ ಜತೆಗೆ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿಗಳು ದೊಡ್ಡ ಸುದ್ದಿ ಮಾಡಿತ್ತು. ಆ ಸಮಯದಲ್ಲಿ, ಚೀನಾಕ್ಕೆ ಅನುಕೂಲವಾಗುವಂತೆ ತೈವಾನ್‌ನಲ್ಲಿ ಸ್ಟಾರ್‌ಲಿಂಕ್ ಸೇವೆಗಳನ್ನು ಮಿತಿಗೊಳಿಸುವಂತೆ ಪುಟಿನ್ ಅವರ ಮೇಲೆ ಒತ್ತಡ ಹೇರಿದ್ದರು ಎಂದು ಒಂದಷ್ಟು ವರದಿಗಳು ಸೂಚಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net