ಅಲ್​ಖೈದಾ ಮಾಜಿ ಕಮಾಂಡರ್, ಸಿರಿಯನ್ ಅಧ್ಯಕ್ಷ ಅಲ್​-ಶರಾಗೆ ಎಷ್ಟು ಹೆಂಡತಿಯರು? ಎಂದು ಟ್ರಂಪ್ ತಮಾಷೆ| Donald Trump

ವಿಜಯವಾಣಿ - 2025-11-13T141148.565
Published on

ವಾಷಿಂಗ್ಟನ್​: ಐತಿಹಾಸಿಕವಾಗಿ 1946ರ ಬಳಿಕ ಇದೇ ಮೊದಲ ಭಾರಿಗೆ ನಿನ್ನೆ(ನ. 12) ಸಿರಿಯನ್ ಅಧ್ಯಕ್ಷನೊಬ್ಬರು ಅಮೆರಿಕಾಕ್ಕೆ ಭೇಟಿ ನೀಡಿ ಶ್ವೇತಭವನದ ಅತಿಥ್ಯವನ್ನು ಸ್ವೀಕರಿಸಿದ್ದಾರೆ. ಸಿರಿಯನ್​ ಅಧ್ಯಕ್ಷ ಅಹ್ಮದ್ ಅಲ್​-ಶರಾ ಅವರು ಡೊನಾಲ್ಡ್ ಟ್ರಂಪ್(Donald Trump) ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಈ ವೇಳೆ ಸಭೆಯಲ್ಲಿ ಅಧ್ಯಕ್ಷ ಟ್ರಂಪ್ ಅವರು ಅಲ್​-ಶರಾ ಅವರಿಗೆ ಸುಗಂಧ ಧ್ರವ್ಯದ ಬಾಟಲಿಯನ್ನು(ಸೆಂಟ್) ನೀಡಿದ್ದಾರೆ. ಹಾಗೆಯೇ ಅದನ್ನು ಸಿಂಪಡಿಸುತ್ತಾ, ಇದು ಅತ್ಯುತ್ತಮ ಸುಗಂಧ, ನಿಮಗೆ ಇನ್ನೊಂದು ನಿಮ್ಮ ಹೆಂಡತಿಗೆ ಎಂದು ತಮಾಷೆಯಾಗಿ ಎಷ್ಟು ಮಂದಿ ಹೆಂಡತಿಯರು ಎಂದು ಕೇಳಿದ್ದಾರೆ. ಅದಕ್ಕೆ ಮಾಜಿ ಅಲ್​-ಖೈದಾ ಕಮಾಂಡರ್ ಅಹ್ಮದ್ ಅಲ್-ಶರಾ ಒಬ್ಬರೇ ಎಂದು ನಗುತ್ತಾ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಧ್ಯಕ್ಷ ಅಲ್-ಶರಾ ಅವರ ಭೇಟಿಯು 1946ರಲ್ಲಿ ಫ್ರಾನ್ಸ್‌ನಿಂದ ದೇಶ ಸ್ವಾತಂತ್ರ್ಯ ಪಡೆದ ನಂತರ ಸಿರಿಯಾದ ನಾಯಕರೊಬ್ಬರು ಶ್ವೇತಭವನಕ್ಕೆ ನೀಡಿದ ಮೊದಲ ಅಧಿಕೃತ ಭೇಟಿ ಇದಾಗಿದೆ. ಈ ಭೇಟಿಯು ಸಿರಿಯಾ ಮೇಲಿನ ನಿರ್ಬಂಧಗಳನ್ನು ಇನ್ನೂ 180 ದಿನಗಳವರೆಗೆ ಅಮೆರಿಕಾ ವಿಸ್ತರಿಸಿದೆ. ಇದೇ ವೇಳೆ ಟ್ರಂಪ್ ಜೊತೆ ಅಲ್​-ಶರಾ ಪ್ರಾದೇಶಿಕ ವಿಷಯಗಳನ್ನು ಚರ್ಚಿಸಿದ್ದಾರೆ ಎಂದು ಸಿರಿಯಾ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್​ನಲ್ಲಿ ಬಶರ್ ಅಲ್-ಅಸ್ಸಾದ್ ಆಡಳಿತವನ್ನು ದಾಳಿಯ ಮೂಲಕ ಅಲ್​-ಶರಾ ನೇತೃತ್ವದ ಇಸ್ಲಾಮಿಸ್ಟ್ ಪಡೆಗಳು ವಶಕ್ಕೆ ಪಡೆದು ಅಧಿಕಾರಕ್ಕೆ ಬಂದಿವೆ. ಈ ಹಿಂದೆ ಅಮೆರಿಕಾ ಇದೇ ಅಲ್​ ಖೈದಾ ಕಮಾಂಡರ್ ಆಗಿದ್ದ ಅಲ್​-ಶರಾ ಅವರನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ, ಅವರನ್ನು ಹಿಡಿಯಲು 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net