ಚುನಾವಣಾ ಕಣದಲ್ಲಿ ಡೊನಾಲ್ಡ್ ಟ್ರಂಪ್​ಗೆ ಹಿನ್ನಡೆ

Edit Collage
Published on

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಕೇವಲ 16 ದಿನ ಬಾಕಿಯುಳಿದಿದ್ದು ಪುನರಾಯ್ಕೆ ಬಯಸಿರುವ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರತಿಸ್ಪರ್ಧಿ ಜೋ ಬಿಡೆನ್​ಗಿಂತ ಶೇ. 9 ಮತಗಳ ಅಂತರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ.

ಟ್ರಂಪ್ ಮಹಿಳೆಯರ ಬೆಂಬಲ ಕಳೆದುಕೊಳ್ಳುತ್ತಿದ್ದಾರೆ. ಬಿಡೆನ್ ತಮ್ಮ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಭಾರತ ಮೂಲದ ಕಮಲಾ ಹ್ಯಾರಿಸ್​ರನ್ನು ಆಯ್ಕೆ ಮಾಡಿಕೊಂಡಿರುವುದು ದೊಡ್ಡ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ಅಮೆರಿಕದ ಆಧುನಿಕ ಚುನಾವಣಾ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಮತದಾರರು ಈ ರೀತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಗರ, ಉಪನಗರ, ಶ್ವೇತವರ್ಣೀಯರು, ಕಪು್ಪವರ್ಣೀಯರು, ವಿದ್ಯಾವಂತರು, ಕಾರ್ವಿುಕರು ಹೀಗೆ ಎಲ್ಲ ವಿಭಾಗಗಳ ಮಹಿಳೆಯರು ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಗಳ ಪರವಾಗಿ ನಿಂತಿರುವುದು ಸ್ಪಷ್ಟವಾಗಿದೆ. ರುಟ್​ಜರ್ಸ್ ವಿಶ್ವವಿದ್ಯಾಲಯದ ಅಮೆರಿಕನ್ ಮಹಿಳಾ ಮತ್ತು ರಾಜಕೀಯ ಕೇಂದ್ರದ ಪ್ರಕಾರ, ಬಿಡೆನ್ ಅಪಾರ ಮಹಿಳಾ ಬೆಂಬಲ ಗಳಿಸಿದ್ದಾರೆ. ಟ್ರಂಪ್​ಗಿಂತ ಬಿಡೆನ್​ರಿಗೆ ಹೆಚ್ಚಿನ ಮಹಿಳಾ ಮತದಾರರು ಬೆಂಬಲ ನೀಡುತ್ತಿದ್ದಾರೆ ಎಂದು ಫಾಕ್ಸ್ ನ್ಯೂಸ್ ಹೇಳಿದೆ.

ಸಮೀಕ್ಷೆ ಎಷ್ಟು ಸರಿ?: ರಿಯಲ್ಕ್ಲಿಯರ್​ಪಾಲಿಟಿಕ್ಸ್ ಸಮೀಕ್ಷೆ ಪ್ರಕಾರ, ಬಿಡೆನ್ ಶೇಕಡ 9.0 ಅಂಕಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆದರೆ ಅಮೆರಿಕದಲ್ಲಿ ಜನಾಭಿಪ್ರಾಯ ಸಂಗ್ರಹಕ್ಕಿಂತ ಎಲೆಕ್ಟೋರಲ್ ಕಾಲೇಜ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದು ಈ ವರೆಗಿನ ಅನುಭವ ತೋರಿಸಿಕೊಟ್ಟಿದೆ. 2016ರಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಪರವಾಗಿ ಜನಮತ ಸಮೀಕ್ಷೆ ತೀರ್ಪು ಬಂದಿತ್ತು. ಆದರೆ ಎಲ್ಲ ನಿರೀಕ್ಷೆ ತಲೆಕೆಳಗಾಗಿ ಟ್ರಂಪ್ ಜಯಭೇರಿ ಬಾರಿಸಿದ್ದರು.

ಡೊನಾಲ್ಡ್ ಟ್ರಂಪ್ ಹತಾಶೆ?: ಶುಕ್ರವಾರ ಫ್ಲಾರಿಡಾ ಮತ್ತು ಜಾರ್ಜಿಯಾದಲ್ಲಿ ಟ್ರಂಪ್ ಮಾಡಿದ ಭಾಷಣಗಳು ಅವರ ಹತಾಶೆಯನ್ನು ಪ್ರತಿಬಿಂಬಿಸುವಂತಿದ್ದವು. ಜೋ ಬಿಡೆನ್ ಗೆದ್ದರೆ ಕಮ್ಯುನಿಸ್ಟ್ ಆಡಳಿತ ಬಂದಂತಾಗುತ್ತದೆ. ಕ್ರಿಮಿನಲ್ ವಲಸಿಗರ ಪ್ರವಾಹವೇ ಹರಿದು ಬರಲಿದೆ ಎಂಬ ಅವರ ಮಾತುಗಳು ಜನರನ್ನು ಭಾವನಾತ್ಮಕವಾಗಿ ಹೈಜಾಕ್ ಮಾಡುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ದೇಶದ ಅಧ್ಯಕ್ಷೀಯ ರಾಜಕಾರಣದಲ್ಲಿ ಅತ್ಯಂತ ಕೆಟ್ಟ ಅಭ್ಯರ್ಥಿ ವಿರುದ್ಧ ನಾನು ಸೆಣಸುತ್ತಿರುವುದರಿಂದ ಭಾರಿ ಒತ್ತಡ ಉಂಟಾಗಿದೆ. ನಾನು ಸೋಲುವುದನ್ನು ನೀವು ಊಹಿಸುತ್ತೀರಾ? ‘ಒಂದು ವೇಳೆ ಸೋತರೆ ನಾನು ದೇಶವನ್ನೇ ಬಿಟ್ಟು ಹೋಗಬೇಕಾಗಬಹುದು. ಏನಾಗುವುದೋ ನನಗೆ ಗೊತ್ತಿಲ್ಲ’ ಎಂದು ಟ್ರಂಪ್ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ. ಬಿಡೆನ್ ಕುಟುಂಬ ಭ್ರಷ್ಟಾಚಾರಿ ಸಂಸ್ಥೆ ಎಂದೂ ಅವರು ವಾಗ್ದಾಳಿ ಮಾಡಿದ್ದಾರೆ. ‘ಪ್ರತಿಪಕ್ಷಕ್ಕೆ ಮೌಲ್ಯಗಳ ಬಗ್ಗೆ ಕಿಂಚಿತ್ತೂ ಗೌರವವಿಲ್ಲ. ದೇಶವನ್ನು ಕಮ್ಯುನಿಸ್ಟ್ ಆಗಿ ಪರಿವರ್ತಿಸುವುದು ಅವರ ಉದ್ದೇಶವಾಗಿದೆ’ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net