

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡನೇ ದಿನದ ಕಾರ್ಯಕ್ರಮ ಪ್ರಾರಂಭವಾಗಿದೆ. ರಾಷ್ಟ್ರಪ್ರತಿ ಭವನದಲ್ಲಿ ಟ್ರಂಪ್ ಅವರ ಗೌರವಾರ್ಥ ಸಮಾರಂಭ ಜರುಗಿತು. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ ಹಾಗೂ ಕೇಂದ್ರ ಸಚಿವರು ರಾಷ್ಟ್ರಪತಿ ಭವನಕ್ಕೆ ಆಗಮಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಮೆಲಾನಿಯಾ ಟ್ರಂಪ್ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ್ದು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವಾಗತ ಕೋರಿದರು. ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಅಲ್ಲಿರುವ ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳಿಗೆ ಶೇಕ್ ಹ್ಯಾಂಡ್ ಮಾಡಿದ ಟ್ರಂಪ್ ಚುಟುಕಾಗಿ ಮಾತುಕತೆ ನಡೆಸಿದರು.
ರಾಷ್ಟ್ರಪತಿ ಭವನದಲ್ಲಿ ಎರಡೂ ದೇಶಗಳ ರಾಷ್ಟ್ರಗೀತೆ ಹಾಡಲಾಯಿತು. ಮೂರೂ ಸೇನಾಪಡೆಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಗೌರವ ಸಲ್ಲಿಸಲಾಯಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೆಲಾನಿಯಾ ಟ್ರಂಪ್, ರಾಷ್ಟ್ರಪತಿ ರಾಮನಾಥ ಕೋವಿಂದ, ಅವರ ಪತ್ನಿ ಸವಿತಾ ಕೋವಿಂದ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ಗ್ರೂಪ್ ಫೋಟೋಕ್ಕೆ ಪೋಸ್ ನೀಡಿದರು.