ಮಾಯೆಯ ಮಿತಿ ಮೀರಿದ ಬುದ್ಧಿಯೋಗವೇ ನಿಜವಾದ ಶ್ರೇಯಸ್ಸು

4-685edebce3ef2
Published on
ಶ್ರೀಯನಾಯುವ ಬಲವ ಜಯವ ಬೇಡಿರ್ದೊಡಂ|

ಗಾಯತ್ರಿಯನೆ ಪರಮಮಂತ್ರವೆಂದಾರ್ಯರ್||

ಧೀಯಂಪ್ರಚೋದಿಸೆಂದನುದಿನದಿ ಬೇಡಿದರು|

ಶ್ರೇಯಸ್ಸು ಧೀಮಹಿಮೆ-ಮಂಕುತಿಮ್ಮ||546||

ಐಶ್ವರ್ಯವನ್ನು, ಆಯುಷ್ಯವನ್ನು, ಬಲವನ್ನು, ಜಯವನ್ನು ಬೇಡುವುದಾದರೂ, ಪ್ರಾಜ್ಞರು ಗಾಯತ್ರಿ ಮಂತ್ರವನ್ನೇ ಪರಮ ಮಂತ್ರವೆಂದು ನಂಬಿದ್ದರು. ಹಾಗಾಗಿ ಅನುದಿನವೂ ಬುದ್ದಿಯನ್ನು ಪ್ರಚೋದಿಸು ಎಂದು ಬೇಡಿದರು. ಶ್ರೇಯಸ್ಸು ಪಡೆಯಲಿರುವ ನಿಜದಾರಿ ಧೀಮಹಿಮೆ ಎನ್ನುತ್ತದೆ ಈ ಕಗ್ಗ.

ಆಸೆಯು ಮನುಷ್ಯ ಜೀವಿತವನ್ನು ಮುನ್ನಡೆಸುವ ಇಂಧನ. ಹಾಗೆಯೇ ಜೀವನಾನುಭವವನ್ನೂ ವಿಸ್ತರಿಸುತ್ತದೆ. ಆಸೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ತವಕಿಸುವುದು, ಶ್ರಮಿಸುವುದು, ಸಹಾಯ ುವನ್ನು ಬೇಡುವುದು, ದಕ್ಕದೆ ಹೋದಾಗ ನಿರಾಶೆಗೊಳ್ಳುವುದು, ಮತ್ತೆ ಮರಳಿ ಪ್ರಯತ್ನಿಸುವುದು ಜನಜೀವನದ ರೀತಿ. ಹೀಗೆ ಏಳು-ಬೀಳುಗಳನ್ನು ಕಾಣುತ್ತಾ ಸಾಗುವ ಬದುಕಿನಲ್ಲಿ ಮನುಷ್ಯನ ಪ್ರಯತ್ನವನ್ನೂ ಮೀರಿದ ಆಸೆಗಳನ್ನು ಪೂರೈಸಿಕೊಳ್ಳಲು ವ್ಯಕ್ತಿಯು ನಿಯಾಮಕ ಶಕ್ತಿಯ ಮೊರೆಹೋಗುತ್ತಾನೆ. ಐಶ್ವರ್ಯ, ದೀರ್ಘಾಯುಷ್ಯ, ಬಲ ಮತ್ತು ಯಶಸ್ಸನ್ನು ನೀಡೆಂದು ದೀನನಾಗಿ ಬೇಡುತ್ತಾನೆ. ಸಾಮಾನ್ಯ ಜನರಂತೂ ದೇವರನ್ನು ತಮ್ಮ ಆಸೆಗಳನ್ನು ಪೂರೈಸುವವನಾಗಿ, ಸಂಕಟದಲ್ಲಿ ಕಾಪಾಡುವ ರಕ್ಷಕನಾಗಿ ಕಾಣುತ್ತಾರೆ.

ಆದರೆ ಮಹಿಮಾನ್ವಿತರಾದ ಪ್ರಾಜ್ಞರು ಹೀಗಲ್ಲ. ಬದುಕಿಗೆ ಐಶ್ವರ್ಯ, ಆಯುಷ್ಯ, ಬಲ, ಗೆಲುವು ದೇವರ ಕೃಪೆಯಿಂದ ಸಿಗುತ್ತದೆ. ಆದರೆ ಅವೆಲ್ಲವನ್ನೂ ಪಡೆಯುವ ಬುದ್ಧಿಶಕ್ತಿಯು ಮನುಷ್ಯನಲ್ಲೇ ಇದೆ. ಹಾಗಾಗಿ ಬುದ್ಧಿಯನ್ನು ಪ್ರಚೋದಿಸು, ವಿವೇಕವನ್ನು ಎಚ್ಚರಿಸು ಎಂದು ಬೇಡುವುದು ಸೂಕ್ತ ಎಂದು ತಿಳಿದಿದ್ದರು. ಯಾವುದನ್ನು ಪಡೆದರೆ ಎಲ್ಲಾ ಸೌಭಾಗ್ಯಗಳು ನಮ್ಮದಾಗುತ್ತವೋ, ಯಾವುದು ಇಂದ್ರಿಯಗಳನ್ನು ಹದ್ದುಬಸ್ತಿ ನಲ್ಲಿರಿಸಿಕೊಂಡು ಸಾಧನೆಯನ್ನು ಮಾಡಬಲ್ಲುದೋ ಆ ದಿವ್ಯ ಮತಿಯನ್ನು ಪಡೆಯುವ, ಜಾಗ್ರತಗೊಳಿಸುವ ಕೆಲಸವಾಗಬೇಕು. ಅದಕ್ಕಾಗಿ ಗಾಯತ್ರಿ ಮಂತ್ರವೆಂಬ ಪರಮ ಮಂತ್ರವನ್ನು ಉಪದೇಶಿಸಿದರು.

ಒಮ್ಮೆ ಕ್ಷತ್ರಿಯ ಧರ್ಮದಂತೆ ರಾಜ್ಯವನ್ನಾಳುತ್ತಿದ್ದ ವಿಶ್ವಾಮಿತ್ರರು ವಸಿಷ್ಠ ಮಹರ್ಷಿಗಳ ಬ್ರಹ್ಮಶಕ್ತಿಯನ್ನು ಮನಗಂಡು ತಾನೂ ಆ ಬ್ರಹ್ಮ ಜ್ಞಾನವನ್ನು ಪಡೆಯಬೇಕೆಂದು ನಿರ್ಧರಿಸಿದರು. ಅದಕ್ಕಾಗಿ ಹಲವು ವರುಷಗಳ ಕಾಲ ತಪಸ್ಸನ್ನು ಮಾಡಿ, ಸತತ ಪ್ರಯತ್ನದ ಮೂಲಕ ಬ್ರಹ್ಮಶ್ರೀ ಗಳಾದರು. ಋಷಿಗಳೆಲ್ಲರೂ ಆತ್ಮೋನ್ನತಿಯೊಂದಿಗೆ, ಲೋಕಕಲ್ಯಾಣವನ್ನೂ ಹಾರೈಸುತ್ತಾರೆ. ಅಂತೆಯೇ ವಿಶ್ವಾಮಿತ್ರರು ಜಗತ್ತಿನ ಕ್ಷೇಮಕ್ಕಾಗಿ ಪ್ರಜ್ಞಾವಂತ ಪ್ರಜೆಗಳ ಅಗತ್ಯವಿದೆ, ಜ್ಞಾನದಿಂದ ಮಾತ್ರ ಸಮಾಜದ ಉದ್ದಾರ ಸಾಧ್ಯ ಎಂದು ತಿಳಿದು, ಗಾಯತ್ರಿ ಮಂತ್ರವನ್ನು ಸ್ವಯಂ ತಾವೇ ರೂಪಿಸಿದರು.

ತತ್ ಸವಿತೃವರೇಣ್ಯಮ್ ಭಗೋ ದೇವಸ್ಯ ಧೀಮಹಿ| ಧಿಯೋ ಯೋ ನಃ ಪåಚೋದಯಾತ್|| (ಜಗವ ಪೆತ್ತಾ ದೇವನತಿ ಪೂಜ್ಯತೇಜಗಳ| ಬಗೆವೆವ್ ಆತಂ ಪ್ರೇರಿಸುಗೆ ನಮ್ಮ ಬುದ್ಧಿಗಳ||- ಡಿ.ವಿ.ಜಿ ಯವರ ಅನುವಾದ) ಜ್ಯೋತಿರ್ಮಯನೂ ಪ್ರತ್ಯಕ್ಷ ದೈವವು ಆಗಿರುವ ಸೂರ್ಯದೇವನು ನಮ್ಮ ಧೀಶಕ್ತಿಯನ್ನು ಅಂದರೆ ಬುದ್ಧಿಶಕ್ತಿಯನ್ನು ಪ್ರಚೋದಿಸಲಿ ಎನ್ನುವುದು ಈ ಮಂತ್ರದ ಆಶಯ. ಇದನ್ನು ಹೇಗೆಂದರೆ ಹಾಗೆ ಹೇಳುವುದಕ್ಕಿಲ್ಲ. ವ್ಯಕ್ತಿಯ ಕ್ಷೇಮವನ್ನು ದೃಷ್ಟಿಯಲ್ಲಿರಿಸಿಕೊಂಡು ಮಂತ್ರೋಚ್ಛರಣೆಗೆ ಕೆಲವೊಂದು ನಿಯಮಗಳನ್ನು, ಉಪನಯನಾದಿ ಸಂಸ್ಕಾರಗಳನ್ನೂ ನಡೆಸಬೇಕೆಂದೂ ಹಿರಿಯರು ಸೂಚಿಸಿದರು. ಇದನ್ನು ಅನುಸರಿಸಿ ಸಾಧಕರಾದ ಹಲವು ಮಹನೀಯರು ನಮ್ಮ ನಡುವೆ ಇದ್ದಾರೆ.

ಹೀಗೆ ಮನುಷ್ಯ ಬದುಕಿಗೆ ಬೇಕಾದ ಲೌಕಿಕ ಸುಖ-ಸೌಲಭ್ಯಗಳಿಂದ ತೊಡಗಿ ಅಲೌಕಿಕದ ಸೌಭಾಗ್ಯದವರೆಗೂ ಕರುಣಿಸಬಲ್ಲ ಶಕ್ತಿಯು ಗಾಯತ್ರಿ ಮಂತ್ರಕ್ಕಿದೆ ಎನ್ನುವುದನ್ನು ಅರಿತಿದ್ದ ಹಿರಿಯರು ಅದನ್ನು ಪರಮಮಂತ್ರವೆಂದು ಸ್ವೀಕರಿಸಿದ್ದರು. ಬುದ್ಧಿಶಕ್ತಿಯನ್ನು ಪ್ರಚೋದಿಸು ಎಂದು ಅನುದಿನವೂ ಬೇಡಿ ಪಡೆದರು. ಇಲ್ಲಿ ಬುದ್ಧಿ ಎಂದರೆ ಇಂದ್ರಿಯಗಳ ಸೆಳೆತವನ್ನೂ ಮೀರಿ ಚಿತ್ತವು ಪರಮಾತ್ಮನಲ್ಲಿ ನೆಲೆಯಾಗುವ ಬುದ್ಧಿಯೋಗವು ಪ್ರಾಪ್ತವಾಗಬೇಕು ಎನ್ನುವ ಹಂಬಲ.

ಧೀರರಾದವರು ಪ್ರತಿಯೊಂದು ವಿಚಾರವನ್ನೂ ಚೆನ್ನಾಗಿ ವಿಶ್ಲೇಷಣೆ ಮಾಡುತ್ತಾರೆ. ಇಂದ್ರಿಯಗಳ ಚಪಲಕ್ಕೆ ಅಥವಾ ಕ್ಷಣಿಕ ಆಕರ್ಷಣೆಗೆ ಬಲಿಯಾಗದೆ ಜೀವನಾದರ್ಶಗಳಿಗಾಗಿ ಬಾಳುವ ಶ್ರೇಯಸ್ಸನ್ನು ಪಡೆಯಲು ಹಂಬಲಿಸುತ್ತಾರೆ. ಕೆಲವರು ತನಗೆ ಸುಖವನ್ನು ನೀಡುವ ವಸ್ತುಗಳನ್ನು ಸಂಗ್ರಹಿಸಲು ಚಡಪಡಿಸುತ್ತಾರೆ, ಸ್ವಕೇಂದ್ರಿತವಾಗಿಯಷ್ಟೇ ಯೋಚಿಸುತ್ತಾರೆ. ಇದನ್ನು ಪ್ರೇಯಸ್ಸು ಎನ್ನುತ್ತಾರೆ. ಅದೇ ಶ್ರೇಯಸ್ಸಿನಲ್ಲಿ ಸಕಲರ ಒಳಿತಿಗಾಗಿ ಸ್ವಾರ್ಥವಿಲ್ಲದೆ ಶ್ರಮಿಸಲಾಗುತ್ತದೆ, ವಿಶಾಲವಾಗಿ ಯೋಚಿಸಲಾಗುತ್ತದೆ.

ಪ್ರೇಯಸ್ಸು ಬದುಕನ್ನು ಭೋಗಜೀವಿತಕ್ಕೆ ಬಂಧಿಸಿದರೆ, ಶ್ರೇಯಸ್ಸು ಎಲ್ಲಾ ನಂಟಿನಿಂದ ಮುಕ್ತಗೊಳಿಸಿ ಆತ್ಮೋನ್ನತಿಯ ದಾರಿಯಲ್ಲಿ ಮುನ್ನಡೆಸುತ್ತದೆ. ಅಂಥ ಶ್ರೇಯಸ್ಸನ್ನು ಪಡೆಯಲು ಬುದ್ಧಿಯನ್ನು ಪ್ರಚೋದಿಸು ಎಂದು ಜಗದ ಕಣ್ಣಾದ ಸೂರ್ಯನಲ್ಲಿ ಬೇಡಿಕೊಳ್ಳುತ್ತಾರೆ. ಬಾಹ್ಯ ಆಕರ್ಷಣೆಗಳಿಗೆ ಬಲಿಯಾಗದೆ ಮಾಯೆಯ ಪರಿಮಿತಿಯನ್ನು ಮೀರಿ ಯೋಚಿಸುವ ಬುದ್ಧಿಯೋಗವೇ ನಿಜವಾದ ಶ್ರೇಯಸ್ಸು. (ಲೇಖಕರು ಉಪನ್ಯಾಸಕರು, ಕವಯಿತ್ರಿ. ಪ್ರತಿಕ್ರಿಯಿಸಿ: vvsudina@gmail.com,kaviadoor@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net