ಕೋಮುಗಲಭೆಯಿಂದ ದುಡಿಯುವ ವರ್ಗಕ್ಕೆ ತೊಂದರೆ

shanti meravanige
ಶಿವಮೊಗ್ಗ ಸಿಮ್ಸ್ ಆವರಣದ ಎದುರು ಸೌಹಾರ್ದ ಶಾಂತಿ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು. ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಶ್ರೀ ಅಭಿನವ ಸ್ವಾಮೀಜಿ, ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಡಾ. ಕ್ಲಿಫರ್ಡ್ ರೋಶನ್ ಪಿಂಟೋ, ಮೌಲಾನ ಹಕೀಲ್ ಅಹಮ್ಮದ್, ಮೌಲಾನ ಶಾಹುಲ್ ಹಮೀದ್, ಎಚ್.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಬಿ.ಎ.ರಮೇಶ್ ಹೆಗ್ಡೆ, ಕೆ.ರಂಗನಾಥ್ ಮತ್ತಿತರರು ಇದ್ದರು.
Published on

ಶಿವಮೊಗ್ಗ: ನಮ್ಮ ಧರ್ಮಗಳ ಆಚರಣೆಗೆ ತಮ್ಮ ಮನೆಗಳಿಗೆ ಸೀಮಿತವಾಗಿರಬೇಕು. ಅದನ್ನು ಹೊರಗೆ ತಂದರೆ ಸಾಮಾಜಿಕ ಸ್ವಾಸ್ಥೃ ಹದಗೆಡುತ್ತದೆ. ಕೋಮುಗಲಭೆಯಾದರೆ ಬಡವರು, ಕೂಲಿ ಕಾರ್ಮಿಕರು ದುಡಿಯುವ ವರ್ಗಕ್ಕೆ ತೊಂದರೆ ಆಗಲಿದೆ ಎಂದು ಬಸವ ಕೇಂದ್ರ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಸೌಹಾರ್ದವೇ ಹಬ್ಬದ ನಿಮಿತ್ತ ಶಾಂತಿ ಮೆರವಣಿಗೆ ಬಳಿಕ ನಗರದ ಸೈನ್ಸ್ ಮೈದಾನದಲ್ಲಿ ಗುರುವಾರ ಮಾತನಾಡಿದ ಅವರು, ರಾಜಕಾರಣಿಗಳು ಧರ್ಮದ ಬಗ್ಗೆ ಮಾತನಾಡಬಾರದು. ಧರ್ಮದ ಬಗ್ಗೆ ಮಾತನಾಡದಿರೆ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ರಾಜಕಾರಣಿಗಳ ಮಾತುಗಳನ್ನು ಜನರೂ ಉದಾಸಿನ ಮಾಡಬೇಕು ಎಂದು ಸಲಹೆ ನೀಡಿದರು.
ಜಾಮೀಯಾ ಮಸೀದಿ ಮೌಲಾನ ಹಕೀಲ್ ಅಹಮ್ಮದ್ ಮಾತನಾಡಿ, ಭಾರತದಲ್ಲಿ ಸರ್ವರಿಗೂ ಸ್ವಾತಂತ್ರ್ಯ ಸಿಕ್ಕಿದ್ದು ನಮ್ಮ ಸಂಸ್ಕೃತಿಯನ್ನು ನಾವೇ ಉಳಿಸಬೇಕು. ಶಿವಮೊಗ್ಗದ ಹೆಸರು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆಯಬೇಕು. ಅದು ಸೌಹಾರ್ದಯುತವಾಗಿಬೇಕೋ ವಿನಃ ಕೋಮುಗಲಭೆಯಿಂದಲ್ಲ ಎಂದರು.
ಮೌಲಾನ ಶಾಹುಲ್ ಹಮೀದ್ ಮಾತನಾಡಿ, ಮಸೀದಿ, ದೇವಸ್ಥಾನ ಅಥವಾ ಚರ್ಚ್‌ಗಳಿಗೆ ಹೋಗಿ ಕೈಮುಗಿದು ಪ್ರಾರ್ಥನೆ ಮಾಡುವುದು ಮಾತ್ರ ಸೌಹಾರ್ದತೆಯಲ್ಲ. ಎಲ್ಲ ಧರ್ಮಗಳ ಆಚರಣೆಗಳನ್ನು ಗೌರವಿಸುವುದು ನಿಜವಾದ ಸೌಹಾರ್ದತೆ. ಶಿವಮೊಗ್ಗ ಜಿಲ್ಲೆ ಶಾಂತಿಗೆ ಹೆಸರಾಗಿದೆ. ಈ ಜಿಲ್ಲೆಯಲ್ಲಿ ಮತೀಯ ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ನಾವೆಲ್ಲರೂ ಪ್ರೀತಿಯಿಂದ ಬದುಕಬೇಕು. ನಮ್ಮವರನ್ನು ಶಾಂತಿ ಪ್ರೀಯರನ್ನಾಗಿ ಮಾಡಬೇಕು ಎಂದರು.
ಎಸ್‌ಎಂಎಸ್‌ಎಸ್‌ಎಸ್‌ನ ಕಾರ್ಯದರ್ಶಿ ಡಾ. ಕ್ಲಿಫರ್ಡ್ ರೋಶನ್ ಪಿಂಟೊ ಮಾತನಾಡಿ, ಮಾನವಿಯ ಮೌಲ್ಯಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸಹೋದರತ್ವ ಭಾವನೆ ಇರಬೇಕು. ಎಲ್ಲರೂ ಹಬ್ಬಗಳನ್ನು ಒಟ್ಟಾಗಿ ಶಾಂತಿಯಿಂದ ಅಚರಣೆ ಮಾಡಬೇಕು. ಆಗ ಸೌಹಾರ್ದತೆಗೆ ಅರ್ಥ ಬರಲಿದೆ. ಕೋಮುಗಲಭೆಗಳು ಜಿಲ್ಲೆಗೆ ಕೆಟ್ಟ ಹೆಸರು ತಂದುಕೊಡಲಿವೆ ಎಂದು ಆಶಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ್ ಸ್ವಾಮೀಜಿ ಮಾತನಾಡಿ, ರಾಮಾಯಣ, ಖುರಾನ್, ಬೈಬಲ್ಗಳ ಮೊದಲ ಸಾಲಿನಲ್ಲೇ ಸೌಹಾರ್ದತೆ ಕಾಣಬಹುದು. ವಿಶಿಷ್ಟತೆಯಲ್ಲಿ ಏಕತೆಯನ್ನು ಕಾಣುವ ದೇಶ ನಮ್ಮದು. ವೈಮನಸ್ಸುಗಳನ್ನು ಬೇರುಮಟ್ಟದಿಂದಲೇ ಕಿತ್ತೊಗೆದು ಶಿವಮೊಗ್ಗವನ್ನು ಇಡೀ ದೇಶದಲ್ಲಿ ಮಾದರಿ ಜಿಲ್ಲೆಯಾಗಿ ಹೆಸರು ಗಳಿಸುವಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಜಿಲ್ಲೆ ಶಾಂತಿಯನ್ನು ಕಾಣುವಂತಾಗಬೇಕು ಎಂದರು.
ಜಡೆ ಮಠದ ಶ್ರೀ ಮಹಾಂತ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಸ್ವಾಮೀಜಿ, ಸೌಹಾರ್ದ ಹಬ್ಬದ ಪ್ರಮುಖರಾದ ಎಚ್.ಆರ್.ಬಸವರಾಜಪ್ಪ, ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ, ಫಾದರ್ ಪಿಯುಸ್ ಡಿಸೋಜ ಸೇರಿ ನೂರಾರು ಸಮಾನ ಮನಸ್ಕರು ಪಾಲ್ಗೊಂಡಿದ್ದರು.

ನಗರದಲ್ಲಿ ಶಾಂತಿ ಮೆರವಣಿಗೆ
ನಗರದ ಸಿಮ್ಸ್ ಆವರಣದಿಂದ ಸೈನ್ಸ್ ಮೈದಾನದವರೆಗೆ ಶಾಂತಿ ಮೆರವಣಿಗೆ ಸೈನ್ಸ್ ಮೈದಾನದವರೆಗೆ ನಡೆಯಿತು. ಶಾಂತಿ ಮೆರವಣಿಗೆಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮತ್ತು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಸಿಮ್ಸ್ ಆವರಣದಲ್ಲಿ ಚಾಲನೆ ನೀಡಿದರು. ಶಾಂತಿ ನಡಿಗೆಯು ಅಶೋಕ ವೃತ್ತ, ಬಿ.ಎಚ್.ರಸ್ತೆ, ಆಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘದ ಮಾರ್ಗವಾಗಿ ಸೈನ್ಸ್ ಮೈದಾನ ತಲುಪಿತು. ಎಲ್ಲ ಧರ್ಮದ ಧರ್ಮಗುರು, ವಿವಿಧ ಸಂಘಟನೆಗಳ ಮುಖಂಡರು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರು, ಸಾರ್ವಜನಿಕರು ಸೌಹಾರ್ದ ಹಬ್ಬಕ್ಕೆ ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net