

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತಷ್ಟು ಗಂಡಾಂತರ ಎದುರಾಗಿದ್ದು, ನಾಪತ್ತೆಯಾಗಿರುವ ನಾಲ್ವರು ಕಾಂಗ್ರೆಸ್ ಶಾಸಕರಲ್ಲಿ ಓರ್ವ ಶಾಸಕ ವಿಧಾನಸಭಾ ಸ್ಪೀಕರ್ ಎನ್.ಆರ್. ಪ್ರಜಾಪತಿ ಅವರಿಗೆ ಶುಕ್ರವಾರ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ.
ಎರಡನೇ ಬಾರಿಯು ಪಕ್ಷಕ್ಕೆ ಬಹುಮತ ದೊರೆಯಲಿಲ್ಲ. ಅಲ್ಲದೆ, ನನ್ನನ್ನು ನಿರಂತರವಾಗಿ ನಿರ್ಲಕ್ಷಿಸಿಕೊಂಡು ಬರಲಾಗುತ್ತಿದೆ ಎಂದು ಶಾಸಕ ಹರ್ದೀಪ್ ಸಿಂಗ್ ದಂಗ್ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಭ್ರಷ್ಟ ಸರ್ಕಾರದ ಭಾಗವಾಗಿ ಕಾರ್ಯ ನಿರ್ವಹಿಸಲು ಯಾವೊಬ್ಬ ಸಚಿವರು ಸಿದ್ಧರಿಲ್ಲ ಎಂದು ಹೇಳಿದ್ದಾರೆ.
ಸಿಎಂ ಕಮಲ್ನಾಥ್ ಅವರ ಸರ್ಕಾರವನ್ನು ಕೆಳಗೆ ಬೀಳಿಸುವ ಬಿಜೆಪಿ ಪ್ರಯತ್ನವಾಗಿ ಮಂಗಳವಾರ ಗುರುಗ್ರಾಮದ ಹೋಟೆಲ್ಗೆ ತೆರಳಿದ 10 ಶಾಸಕರಲ್ಲಿ ಹರ್ದೀಪ್ ಕೂಡ ಒಬ್ಬರೆನ್ನಲಾಗಿದೆ. ಈಗಾಗಲೇ 6 ಶಾಸಕರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಕಾಂಗ್ರೆಸ್ ಹೇಳಿದೆ.
ಆದರೆ, ಹರ್ದೀಪ್ ಸಿಂಗ್ ದಂಗ್, ರಘುರಾಜ್ ಕಾನ್ಸಾನ, ಬೈಸುಹುಲಾಲ್ ಸಿಂಗ್ ಮತ್ತು ಪಕ್ಷೇತರ ಶಾಸಕ ಶೇರಾ ಭೈಯಾ ನಾಪತ್ತೆಯಾಗೇ ಉಳಿದಿದ್ದಾರೆ. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ನಾಲ್ವರು ಶಾಸಕರನ್ನು ಇರಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಇನ್ನು ರಾಜೀನಾಮೆ ಕುರಿತು ಮಾತನಾಡಿರುವ ಸಿಎಂ ಕಮಲ್ನಾಥ್, ಈ ಬಗ್ಗೆ ನನಗೆ ಮಾಹಿತಿ ಇದೆ. ಶಾಸಕರಿಂದ ಈವರೆಗೂ ಯಾವುದೇ ಪತ್ರವನ್ನು ನಾನು ಸ್ವೀಕರಿಸಿಲ್ಲ ಹಾಗೂ ಚರ್ಚೆಯೂ ನಡೆಸಿಲ್ಲ. ಅವರನ್ನು ಭೇಟಿ ನೀಡಿ ಮಾತನಾಡುವವರೆಗೂ ನಾನು ಈ ಬಗ್ಗೆ ಹೇಳಿಕೆ ಕೊಡುವುದು ಸೂಕ್ತ ಎನಿಸುವುದಿಲ್ಲ ಎಂದು ಹೇಳಿದ್ದಾರೆ.
ಮಧ್ಯಪ್ರದೇಶಲ್ಲಿ ಒಟ್ಟು 230 ವಿಧಾನಸಭಾ ಸ್ಥಾನಗಳಿದ್ದು, ಇಬ್ಬರು ಶಾಸಕ ಮರಣದಿಂದ 228ಕ್ಕೆ ಇಳಿದಿದೆ. ಅದರಲ್ಲಿ ಮ್ಯಾಜಿಕ್ ನಂಬರ್ಗೆ 215 ಸ್ಥಾನಗಳು ಬೇಕಾಗಿದ್ದು, ಸದ್ಯ ಕಾಂಗ್ರೆಸ್ 114, ಬಿಜೆಪಿ 107 ಚುನಾಯಿತ ಪ್ರತಿನಿಧಿಗಳನ್ನು ಹೊಂದಿದೆ. ಉಳಿದಂತೆ ಬಿಎಸ್ಪಿ 2, ಎಸ್ಪಿ 1 ಹಾಗೂ ಪಕ್ಷೇತರರು ನಾಲ್ವರು ಶಾಸಕರಿದ್ದು ಕಾಂಗ್ರೆಸ್ಗೆ ಬೆಂಬಲ ನೀಡಿವೆ. ಅದರಲ್ಲಿ ಪಕ್ಷೇತರರು ಹಾಗೂ ತಮ್ಮದೇ ಪಕ್ಷದ ಶಾಸಕರು ಕಾಣೆಯಾಗಿದ್ದು, ರಾಜೀನಾಮೆ ಪತ್ರ ರವಾನಿಸಿರುವುದರಿಂದ ಕಮಲ್ನಾಥ್ ಸರ್ಕಾರಕ್ಕೆ ಕಂಟಕ ಎದುರಾಗಿದೆ. (ಏಜೆನ್ಸೀಸ್)