ಬಾಡಿಗೆ ತಾಯ್ತನ ಅರ್ಹತೆಗೆ ಟ್ರಿಪಲ್ ಟೆಸ್ಟ್; ಮಗನ ಕಳೆದುಕೊಂಡಿದ್ದ ದಂಪತಿ ನೆರವಿಗೆ ಹೈಕೋರ್ಟ್

High Court
Published on

ಬೆಂಗಳೂರು: ವಯಸ್ಸಿಗೆ ಬಂದ ಏಕೈಕ ಮಗನನ್ನು ಕಳೆದುಕೊಂಡು ಪುತ್ರಶೋಕದಲ್ಲಿದ್ದ ದಂಪತಿಗೆ ಬಾಡಿಗೆ ತಾಯ್ತನದ (ಸರೋಗಸಿ) ಮೂಲಕ ಮಗು ಪಡೆಯಲು ‘ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ-2021’ರ ಕೆಲ ನಿಯಮಗಳು ಅಡ್ಡಿಯಾಗಿದ್ದವು. ಇದೀಗ ಈ ದಂಪತಿಯ ನೆರವಿಗೆ ಧಾವಿಸಿರುವ ಹೈಕೋರ್ಟ್, ಅನುವಂಶಿಕ, ದೈಹಿಕ ಮತ್ತು ಆರ್ಥಿಕ ಪರೀಕ್ಷೆ (ಜೆನೆಟಿಕ್, ಫಿಸಿಕಲ್ ಹಾಗೂ ಎಕನಾಮಿಕ್) ಎಂಬ 3 ಹಂತದ ಪರೀಕ್ಷೆಯನ್ನು ರೂಪಿಸಿದ್ದು, ಇದರ ಆಧಾರದಲ್ಲಿ ದಂಪತಿಯ ಬಾಡಿಗೆ ತಾಯ್ತನದ ಅರ್ಹತೆ ಕುರಿತು ನಿರ್ಧರಿಸುವಂತೆ ರಾಜ್ಯ ಸರೋಗಸಿ ಮಂಡಳಿಗೆ ನಿರ್ದೇಶಿಸಿದೆ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಯಸುವ ಪುರುಷರಿಗೆ 55 ವರ್ಷ ಮೀರಿರಬಾರದು ಹಾಗೂ ಬಾಡಿಗೆ ತಾಯಿಯಾಗುವ ಮಹಿಳೆ ಮಗು ಬಯಸುವ ದಂಪತಿಯೊಂದಿಗೆ ಅನುವಂಶಿಕ ಸಂಬಂಧ ಹೊಂದಿರಬೇಕು ಎಂಬ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆಯ ನಿಯಮಗಳನ್ನು ಪ್ರಶ್ನಿಸಿ ಬೆಂಗಳೂರಿನ 57 ವರ್ಷದ ವ್ಯಕ್ತಿ ಮತ್ತವರ 45 ವರ್ಷದ ಪತ್ನಿ ಹೈಕೋರ್ಟ್​ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿದಾರರು ಸರೋಗಸಿ ಕಾಯ್ದೆಯ ಸೆಕ್ಷನ್​ಗಳಾದ 2(1)(ಜಡ್​ಜಿ) ಹಾಗೂ ಸೆಕ್ಷನ್ 4(3)(ಸಿ)(ಈ) ಪ್ರಶ್ನಿಸಿದ್ದಾರೆ. ಸದ್ಯ ಈ ವಿಚಾರ ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇರುವ ಹಿನ್ನೆಲೆಯಲ್ಲಿ ಈಗ ಪರಿಗಣಿಸಲಾಗದು. ಆದರೆ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಅರ್ಹತೆಗಾಗಿ ದಂಪತಿ ಅನುವಂಶಿಕ, ದೈಹಿಕ ಹಾಗೂ ಆರ್ಥಿಕ ಪರೀಕ್ಷೆಯಲ್ಲಿ ಉತ್ತೀರ್ಣವಾಗುವ ಅಗತ್ಯವಿದೆ. ಆದ್ದರಿಂದ, ಅರ್ಜಿದಾರರು ಈ ಮೂರೂ ಪರೀಕ್ಷೆಗೆ ಒಳಪಡಬೇಕು ಎಂದು ಹೇಳಿದೆ.

ಹೈಕೋರ್ಟ್ ರೂಪಿಸಿದ ಟ್ರಿಪಲ್ ಟೆಸ್ಟ್: ಭ್ರೂಣದ ಬೆಳವಣಿಗೆಗೆ ಆರೋಗ್ಯಕರ ವೀರ್ಯ ಹಾಗೂ ಅಂಡಾಣು ಅಗತ್ಯವಿರುತ್ತದೆ. 35ರಿಂದ 40 ವರ್ಷ ದಾಟಿದ ಪುರುಷರಲ್ಲಿ ವೀರ್ಯದ ಆರೋಗ್ಯ ಕುಗ್ಗುತ್ತದೆ ಎಂದು ವೈದ್ಯಕೀಯವಾಗಿ ಕಂಡುಕೊಳ್ಳಲಾಗಿದೆ. ಪ್ರಕರಣದಲ್ಲಿ ಅರ್ಜಿದಾರ ಪತಿಗೆ 57 ವರ್ಷ ಆಗಿರುವುದರಿಂದ ಅವರ ವೀರ್ಯದ ಶಕ್ತಿ ಹಾಗೂ ಗುಣಮಟ್ಟದ ಪರೀಕ್ಷೆ ನಡೆಸುವ ಅಗತ್ಯವಿದ್ದು, ಅವರು ಮೊದಲ ಹಂತದ ಪರೀಕ್ಷೆಯಾದ ಅನುವಂಶಿಕ ಪರೀಕ್ಷೆ ಒಳಪಡಬೇಕಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಮಗುವಿನ ಪಾಲನೆಗೆ ದಂಪತಿ ದೈಹಿಕವಾಗಿ ಸಮರ್ಥರಾಗಿದ್ದಾರೆಯೇ ಎಂಬುದನ್ನು ದೃಢಪಡಿಸಲು 2ನೇ ಪರೀಕ್ಷೆಯಾದ ದೈಹಿಕ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಮಗುವಿನ ಬೆಳವಣಿಗೆ, ರಕ್ಷಣೆ ಮತ್ತು ಭದ್ರತೆಗಾಗಿ ಆಸ್ತಿ ಅಥವಾ ನಿಶ್ಚಿತ ಠೇವಣಿ ಇರಿಸುವ ಬಗ್ಗೆ 3ನೇ ಪರೀಕ್ಷೆಯಾದ ಆರ್ಥಿಕ ಪರೀಕ್ಷೆಗೆ ಒಳಪಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಈ ಮೂರೂ ಪರೀಕ್ಷೆಗೆ ಒಳಪಡುತ್ತೇನೆ ಎಂಬ ಪ್ರಮಾಣಪತ್ರದೊಂದಿಗೆ ಅರ್ಜಿದಾರರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಅರ್ಹತಾ ಪ್ರಮಾಣಪತ್ರ ಕೋರಿ ರಾಜ್ಯ ಸರೋಗಸಿ ಮಂಡಳಿ ಅಥವಾ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯಾದರೆ, ಸಂಬಂಧಪಟ್ಟ ಪ್ರಾಧಿಕಾರ 4 ವಾರದಲ್ಲಿ ಅದನ್ನು ಪರಿಗಣಿಸಿ ಅರ್ಜಿದಾರರಿಗೆ ಅರ್ಹತಾ ಪ್ರಮಾಣಪತ್ರ ವಿತರಿಸುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಿರ್ಧಾರ ಕೈಗೊಳ್ಳುವಾಗ ಈ ತೀರ್ಪಿನಲ್ಲಿ ಉಲ್ಲೇಖಿಸಿರುವ ಎಲ್ಲ ಅಂಶಗಳನ್ನೂ ಮಂಡಳಿ ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಅಪಘಾತದಲ್ಲಿ ಮಗನ ಸಾವು: ಅರ್ಜಿದಾರರು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ಅವರ ಪತ್ನಿ ಗೃಹಿಣಿಯಾಗಿದ್ದಾರೆ. ಮದುವೆಯ ನಂತರ ದಂಪತಿಗೆ ಓರ್ವ ಪುತ್ರ ಜನಿಸಿದ್ದ. ಈ ಮಧ್ಯೆ, ಅನಾರೋಗ್ಯದ ಕಾರಣದಿಂದ ಅರ್ಜಿದಾರರ ಪತ್ನಿಯ ಗರ್ಭಕೋಶವನ್ನು ಶಸ್ತ್ರಚಿಕಿತ್ಸೆ ನಡೆಸಿ ತೆಗೆದುಹಾಕಲಾಗಿತ್ತು. ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಪುತ್ರ ಮಂಗಳೂರಿನ ಕಾಲೇಜಿನಲ್ಲಿ ಇಂಟರ್ನ್​ಶಿಪ್ ಮಾಡುತ್ತಿದ್ದ. 2022ರ ಡಿ.13ರಂದು ಆತ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ. ಏಕೈಕ ಪುತ್ರನ ಸಾವಿನಿಂದ ದಂಪತಿ ಖಿನ್ನತೆಗೆ ಒಳಗಾಗಿದ್ದರು. ಕೆಲ ದಿನಗಳ ಬಳಿಕ ದಂಪತಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ರಕ್ಷಣೆ) ಕಾಯ್ದೆಯ ನಿಯಮಗಳ ಅನುಸಾರ ಮಗುವೊಂದನ್ನು ದತ್ತುಪಡೆಯಲು ನಿರ್ಧರಿಸಿದ್ದರು. ಆದರೆ, ಹೆಚ್ಚಿನ ಸಂಖ್ಯೆಯ ಪೋಷಕರು ಮಕ್ಕಳನ್ನು ದತ್ತು ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದರಿಂದ ದಂಪತಿಗೆ ಮಗು ದತ್ತು ಪಡೆಯಲು ಕನಿಷ್ಠ 3 ವರ್ಷ ಬೇಕಾಗಲಿದೆ ಎಂದು ತಿಳಿಸಲಾಗಿತ್ತು.

ಸರೋಗಸಿಗೆ ಅಡ್ಡಿಯಾದ ಕಾಯ್ದೆ: ಬಳಿಕ ವೈದ್ಯರೊಂದಿಗೆ ಸಮಾಲೋಚಿಸಿದಾಗ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯಬಹುದೆಂದು ತಿಳಿದುಬಂದಿತ್ತು. ಅದರಂತೆ, ಅರ್ಜಿದಾರರ ನಾದಿನಿ ಅಂಡಾಣು ದಾನ ಮಾಡಲು ಸಮ್ಮತಿಸಿದ್ದರು. 2 ಮಕ್ಕಳ ತಾಯಿಯಾಗಿರುವ ಹತ್ತಿರದ ಕುಟುಂಬ ಸ್ನೇಹಿತೆಯೊಬ್ಬರು (25 ವರ್ಷ) ಬಾಡಿಗೆ ತಾಯಿಯಾಗಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಪತಿಗೆ 57 ವರ್ಷವಾಗಿದ್ದ ಕಾರಣ ಹಾಗೂ ಬಾಡಿಗೆ ತಾಯಿಯಾಗುವ ಮಹಿಳೆ ದಂಪತಿಯ ಅನುವಂಶಿಕ ಸಂಬಂಧಿಯಾಗಿರದ ಕಾರಣ ಸರೋಗಸಿ ಕಾಯ್ದೆಯ ಕೆಲ ಸೆಕ್ಷನ್​ಗಳು ಅಡ್ಡಿಯಾಗಿದ್ದವು. ಇದರಿಂದ, ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net