ಮುಡಾ ಪ್ರಕರಣದ 3 ಮತ್ತು 4ನೇ ಆರೋಪಿಗಳ ವಿಚಾರಣೆ

muda scam
Published on

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಸಂಬಂಧ ಲೋಕಾಯುಕ್ತ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಗುರುವಾರ ಪ್ರಕರಣದ 3 ಮತ್ತು 4ನೇ ಆರೋಪಿಗಳನ್ನು ವಿಚಾರಣೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಕೆಸರೆಯಲ್ಲಿ 3.16 ಎಕರೆ ಜಾಗ ಮಾರಾಟ ಮಾಡಿದ ವಿಚಾರವಾಗಿ ಜಾಗದ ಮಾಲೀಕ ಹಾಗೂ ಪ್ರಕರಣದ 4ನೇ ಅರೋಪಿ ಜೆ.ದೇವರಾಜು, ಸಿದ್ದರಾಮಯ್ಯ ಬಾಮೈದ ಹಾಗೂ 3ನೇ ಆರೋಪಿ ಮಲ್ಲಿಕಾರ್ಜುನ ಸ್ವಾಮಿ ಅವರನ್ನು ವಿಚಾರಣೆ ಎದುರಿಸಿದರು.

ಮೈಸೂರಿನ ದಿವಾನ್ಸ್ ರಸ್ತೆಯ ಲೋಕಾಯುಕ್ತ ಕಚೇರಿಯಲ್ಲಿ ಅರೋಪಿಗಳಾದ ಜೆ.ದೇವರಾಜು ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಬೆಳಗ್ಗಿನಿಂದ ಸಂಜೆವರೆಗೂ ವಿಚಾರಣೆ ನಡೆಸಿದ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದ ತನಿಖಾ ತಂಡ ಅದಕ್ಕೆ ಪೂರಕವಾದ ದಾಖಲೆಗಳನ್ನು ಪರಿಶೀಲನೆ ನಡೆಸಿದರು.

ಇಬ್ಬರನ್ನು ಎದುರು ಬದುರು ಕೂರಿಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ನೀಡಿರುವ ದೂರಿನಂತೆ ಜಮೀನು ಮಾಲೀಕ ದೇವರಾಜು ಅವರಿಗೆ ಕೆಸರೆಯ ಜಾಗವನ್ನು ಯಾವಾಗ ಖರೀದಿ ಮಾಡಲಾಗಿತ್ತು? ಜಮೀನು ದೇವರಾಜು ಅವರಿಗೆ ಹೇಗೆ ಬಂತು? ಮಾರಾಟ ಮಾಡಿದ್ದು ಯಾವಾಗ? ಯಾವ ಕಾರಣಕ್ಕೆ ಮಾರಾಟ ಮಾಡಿದ್ದು ?, ಜಮೀನು ಮಾರಾಟದ ವೇಳೆ ಮುಡಾದ ವಶದಲ್ಲಿ ಇತ್ತಾ?, ನೋಟಿಫೈ ಮಾಡದೇ ಜಮೀನಿನಲ್ಲಿ ಮುಡಾ ಪಾರ್ಕ್, ರಸ್ತೆ ನಿರ್ಮಿಸಿತ್ತಾ?, ಜಮೀನು ಮಾರಾಟಕ್ಕೆ ದೇವರಾಜು ಒಬ್ಬರಿಗೆ ಹಕ್ಕು ಬಂದಿದ್ದು ಹೇಗೆ?, ಡಿನೋಟಿಫೈ ವೇಳೆ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಇತ್ತ? ಈ ಎಲ್ಲ ವಿಚಾರಗಳನ್ನು ಮುಂದಿಟ್ಟುಕೊಂಡು ಮಾಹಿತಿಯನ್ನು ಲೋಕಾಯುಕ್ತ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಹಗರಣದ ಮೂಲದಿಂದಲೇ ತನಿಖೆ ನಡೆಸುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸರು ಪ್ರಥಮ ಹಂತದಲ್ಲಿ 3 ಮತ್ತು 4ನೇ ಆರೋಪಿಗಳ ವಿಚಾರಣೆ ನಡೆಸಿದ್ದಾರೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪಾರ್ವತಿ ಅವರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net