ಅತ್ಯಂತ ಉದ್ದದ ನಾಲಿಗೆ ಹೊಂದಿರುವ 'ರಾಕಿ' ಹೆಸರು ಗಿನ್ನೆಸ್ ದಾಖಲೆಗೆ ಸೇರ್ಪಡೆ!

Dog
Published on

ನ್ಯೂಯಾರ್ಕ್: ಅಮೆರಿಕದ ಇಲಿನಾಯ್ಸ್‌ನ 'ರಾಕಿ' ಹೆಸರಿನ 9 ವರ್ಷದ ನಾಯಿಯೊಂದು 5.6 ಇಂಚುಗಳಷ್ಟು ಉದ್ದದ ನಾಲಿಗೆ ಹೊಂದಿದ್ದು (Longest tongue on a dog), ಇದೀಗ ಗಿನ್ನೆಸ್ ದಾಖಲೆಗೆ (Guinness World Record) ಸೇರ್ಪಡೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳು ವೈರಲ್ ಆಗುತ್ತಿವೆ.

ಈವರೆಗೆ 'ಮೋಚಿ' ಹೆಸರಿನ ನಾಯಿ ಅತ್ಯಂತ ಉದ್ದದ ನಾಲಿಗೆ ಹೊಂದಿದ್ದ ಹೆಗ್ಗಳಿಕೆ ಪಡೆದುಕೊಂಡಿತ್ತು. ಸದ್ಯ ಈ ನಾಯಿ ಮೃತಪಟ್ಟಿದೆ. ಹೀಗಾಗಿ 'ರಾಕಿ' ಹೆಸರು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ. ಈ ನಾಯಿಯ 5.6 ಇಂಚುಗಳಷ್ಟು ಉದ್ದದ ನಾಲಿಗೆ ಬಗ್ಗೆ ಸುದ್ದಿ ಕೇಳಿ ಬಹುತೇಕರು ಅಚ್ಚರಿಪಟ್ಟುಕೊಂಡಿದ್ದಾರೆ.

ಬ್ರಾಡ್ ಮತ್ತು ಕ್ರಿಸ್ಟಲ್ ವಿಲಿಯಮ್ಸ್ ಎಂಬುವರು 'ರಾಕಿ'ಯನ್ನು ಸಾಕುತ್ತಿದ್ದು, ತಮ್ಮ ನಾಯಿ ಉದ್ದನೆಯ ನಾಲಿಗೆ ಹೊಂದಿರುವುದನ್ನು ತಿಳಿದುಕೊಂಡಿದ್ದರು. ಗಿನ್ನೆಸ್ ದಾಖಲೆಗೆ ಅರ್ಜಿ ಸಲ್ಲಿಸುವಂತೆ ಈ ಹಿಂದೆ ಅವರ ಸ್ನೇಹಿತರು ತಿಳಿಸಿದ್ದರು. ಯಾವಾಗ 'ಮೋಚಿ' ಸಾವನ್ನಪ್ಪಿರುವುದು ತಿಳಿಯುತ್ತಿದ್ದಂತೆ, ತಮ್ಮ ನಾಯಿಯ ಬಗ್ಗೆ ವಿವಿರ ಸಲ್ಲಿಸಿದ್ದಾರೆ.

'ನಮ್ಮ ನಾಯಿಯ ನಾಲಗೆ ಮೂರರಿಂದ ನಾಲ್ಕು ಇಂಚಿನಷ್ಟು ಉದ್ದ ಇದೆ ಎಂದು ಮಾಹಿತಿ ನೀಡಿದಾಗ ಒಂದು ಕ್ಷಣ ಎಲ್ಲರೂ ಅಚ್ಚರಿಪಟ್ಟರು. ಬಳಿಕ ಪರಿಶೀಲಿಸಬೇಕಾಗುತ್ತದೆ ಎಂದರು. ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡು ಗಿನ್ನೆಸ್ ದಾಖಲೆಯಲ್ಲಿ ಹೆಸರು ನೋಂದಾವಣೆಯಾಗಲು ಕೆಲವು ತಿಂಗಳುಗಳೇ ಕಳೆಯಿತು' ಎಂದು ಕ್ರಿಸ್ಟಲ್ ವಿಲಿಯಮ್ಸ್ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗಿನ್ನೆಸ್ ತಂಡವು ಪರಿಶೀಲಿಸಲು ಪಶುವೈದ್ಯ ಡಾ.ಬರ್ನಾರ್ಡ್ ಬ್ಲೀಮ್ ಅವರನ್ನು ಕಳುಹಿಸಿತು. ಅವರು ನಾಲಿಗೆಯನ್ನು ಅಳತೆ ಮಾಡಿದರು. ಬಳಿಕ ಮಾಹಿತಿ ರವಾನಿಸಿ, 'ರಾಕಿ' ಈ ಹೆಗ್ಗಳಿಕೆ ತನ್ನದಾಗಿಸಿಕೊಳ್ಳಲು ಅರ್ಹನು ಎಂಬುದನ್ನು ತಿಳಿಸಿದರು ಎಂದು ಕ್ರಿಸ್ಟಲ್ ವಿಲಿಯಮ್ಸ್ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net