

ತಿ.ನರಸೀಪುರ: ತಾಲೂಕಿನ ಗಡಿ ಗ್ರಾಮವಾದ ದೊಡ್ಡಮುಲಗೂಡು ಗ್ರಾಮದಲ್ಲಿ ಮಂಗಳವಾರ ರಾತ್ರಿ ಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ರೈತ ಸ್ವಾಮಿಗೌಡ ಅವರ ತೋಟದಲ್ಲಿ ಹತ್ತಾರು ತೆಂಗಿನ ಮರಗಳು ಮತ್ತು 50ಕ್ಕೂ ಹೆಚ್ಚು ಟೀಕ್ ಮರಗಳು ಧರೆಗುರುಳಿವೆ.
ಬನ್ನೂರು ಹೋಬಳಿಯಾದ್ಯಂತ ಕಳೆದ ರಾತ್ರಿ ಉತ್ತಮ ಮಳೆಯಾಗಿದ್ದು, ಮಳೆಯೊಂದಿಗೆ ಗಾಳಿಯು ತೀವ್ರವಾಗಿ ಬೀಸಿದ್ದರಿಂದ ಅಂಕನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಮುಲಗೂಡು ಗ್ರಾಮದಲ್ಲಿ ಎತ್ತರಕ್ಕೆ ಬೆಳೆದಿದ್ದ ಮರಗಳು ನೆಲಕ್ಕುರಳಿದ್ದರೆ, ಮೂರು ಮನೆಗಳ ಛಾವಣಿ ಹಾರಿ ಹೋಗಿ, ಹಾನಿಯಾಗಿವೆ.
ರೈತ ಸ್ವಾಮಿಗೌಡ ಮಾತನಾಡಿ, ಮಂಗಳವಾರ ರಾತ್ರಿ 7 ಗಂಟೆಗೆ ಆರಂಭಗೊಂಡ ಗಾಳಿ ಸಹಿತ ಮಳೆ ಮೂರು ತಾಸಿಗೂ ಹೆಚ್ಚು ಕಾಲ ರಭಸವಾಗಿ ಬಿದ್ದಿದ್ದರಿಂದ ನಮ್ಮ ತೋಟದಲ್ಲಿ ಫಲವತ್ತಾದ 10 ತೆಂಗಿನ ಮರ ಹಾಗೂ 50ಕ್ಕೂ ಹೆಚ್ಚು ಟೀಕ್ ಮರಗಳು ನೆರಕ್ಕುರುಳಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಅಲ್ಲದೆ ಗ್ರಾಮದಲ್ಲಿ ಮೂರು ಮನೆಗಳ ಛಾವಣಿ ಹಾರಿ ಹೋಗಿ ಹಾನಿಗೊಳಗಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿಸಿದ್ದಾರೆ.