

ಸರಗೂರು: ಕಾಡಂಚಿನ ಹಾದನೂರು ಗ್ರಾಮದಲ್ಲಿ ಗುಡುಗು ಸಹಿತ ಸುರಿದ ಗಾಳಿ ಮಳೆಗೆ ಮರ ಮತ್ತು ವಿದ್ಯುತ್ ಕಂಬಗಳು ಮನೆ, ರಸ್ತೆಯ ಮೇಲೆ ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಶುಕ್ರವಾರ ಸಂಜೆ ಸುರಿದ ಗಾಳಿ, ಮಳೆಗೆ ರಸ್ತೆ ಹಾಗೂ ಗ್ರಾಮದ ಬೀದಿಗಳಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ಮುರಿದು ಬಿದ್ದು, ಸಂಪೂರ್ಣ ನೆಲಕಚ್ಚಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿರುಗಾಳಿಗೆ ಮನೆ ಸರೋಜಾ, ಚಂದ್ರಮ್ಮ, ಕಾಳಮ್ಮ ಅವರ ಮನೆಯ ಛಾವಣಿ ಹಾಗೂ ಗೋಡೆ ಕುಸಿದುಬಿದ್ದಿದೆ. ಕೆಲ್ಲಯ್ಯ ಎಂಬುವವರ ಮನೆಯ ಮೇಲೆ ಮರ ಮತ್ತು ವಿದ್ಯುತ್ ಕಂಬ ಬಿದ್ದು 20 ಶೀಟುಗಳು ಹಾಗೂ 100 ಕ್ಕೂ ಹೆಚ್ಚು ಹೆಂಚುಗಳು ಹಾರಿಹೋಗಿದೆ. ಗ್ರಾಮಸ್ಥರು ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದೂವರೆಗೆ ಪರಿಶೀಲನೆ ನಡೆಸಿಲ್ಲ.
ರಸ್ತೆ ಮತ್ತು ಶಾಲೆಯ ಬಳಿ ಭಾರಿ ಗಾತ್ರದ ಮರ ಮತ್ತು ವಿದ್ಯುತ್ ಕಂಬಗಳು ರಸ್ತೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು. ನಂತರ ಸೆಸ್ಕ್ ಇಂಜಿನಿಯರ್ ದೀಪಕ್ ಮತ್ತು ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ದೀಪಕ್ ಮಾತನಾಡಿ, ತಾಲೂಕಿನ ಹಲವೆಡೆ ಗಾಳಿ ಮಳೆಗೆ 80 ವಿದ್ಯುತ್ ಕಂಬಗಳು ಧರೆಗುಳಿದಿದ್ದು, ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ ಎಂದು ತಿಳಿಸಿದರು. ಯಜಮಾನರಾದ ಮಹದೇವಸ್ವಾಮಿ, ನಾಗರಾಜು, ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್, ಸದಸ್ಯ ರಾಜೇಶ್, ಶಿವರಾಜು, ಕೆಂಪಸಿದ್ದ, ಮುಖಂಡರಾದ ಪುಟ್ಟಸ್ವಾಮಿ, ಶಿವಮೂರ್ತಿ, ಸತೀಶ್, ಮಹದೇವಯ್ಯ, ಸಿದ್ದರಾಜು ಇದ್ದರು.