ಒಬ್ಬ COVID19 ಸೋಂಕುಪೀಡಿತ ಚಿಕಿತ್ಸೆಗೆ ಎಷ್ಟು ವೆಚ್ಚವಾದೀತು?!

Hospital 3 APR 20
Published on

ತಿರುವನಂತಪುರ: ಜನರನ್ನು ಆತಂಕಕ್ಕೆ ಈಡುಮಾಡಿರುವ COVID19 ಸೋಂಕು ತಗುಲಿರುವ ವ್ಯಕ್ತಿಯ ಚಿಕಿತ್ಸೆಗೆ ಎಷ್ಟು ವೆಚ್ಚವಾದೀತು? ಎಂಬ ಕುತೂಹಲ ಸಾಮಾನ್ಯರಿಗೆ ಇರುವುದು ಸಹಜ. ಸಾಮಾನ್ಯವಾಗಿ ಆಸ್ಪತ್ರೆ ಎಂದರೇ ಬಡ-ಮಧ್ಯಮ ವರ್ಗದವರು ಕೂಡಿಟ್ಟ ಸಂಪತ್ತೆಲ್ಲ ಖಾಲಿಯಾಗೋದು ಖಚಿತ ಬೆಚ್ಚಿ ಬೀಳುತ್ತಾರೆ. ಅಂಥದ್ದರಲ್ಲಿ ಸರಿಯಾದ ಔಷಧವೇ ಇಲ್ಲದ ಈ ಸೋಂಕಿಗೆ ಚಿಕಿತ್ಸೆ ಏನು ಎಂಬುದು ಗೊತ್ತಿಲ್ಲದ ಕಾರಣ ವೆಚ್ಚದ ಅರಿವೂ ಇಲ್ಲ. ಆದಾಗ್ಯು, ಕರೊನಾ ಸೋಂಕು ಪೀಡಿತ ವ್ಯಕ್ತಿಯ ಚಿಕಿತ್ಸೆಗೆ ಕೇರಳದಲ್ಲಿ ಎಷ್ಟು ವೆಚ್ಚವಾಗುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಕೇರಳದಲ್ಲಿ ಸದ್ಯ ಈ ಸೋಂಕಿಗೆ ಸಂಬಂಧಿಸಿದ ಎಲ್ಲ ಚಿಕಿತ್ಸೆಯನ್ನೂ ಸರ್ಕಾರವೇ ಉಚಿತವಾಗಿ ಮಾಡುತ್ತಿದೆ. ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಈ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ, ಪಾಸಿಟಿವ್ ಎಂದು ಗುರುತಿಸಿ ಐಸೋಲೇಟ್ ಮಾಡಿದ ವ್ಯಕ್ತಿಯ ಚಿಕಿತ್ಸೆಗೆ ಸರ್ಕಾರ 20,000 ರೂಪಾಯಿಯಿಂದ 25,000 ರೂಪಾಯಿ ತನಕ ಖರ್ಚು ಮಾಡುತ್ತಿದೆ. ಒಂದೊಮ್ಮೆ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿ ಐಸಿಯುಗೆ ವರ್ಗಾಯಿಸಿದರೆ ಆಗ ಚಿಕಿತ್ಸೆಯ ವೆಚ್ಚ 50,000 ರೂಪಾಯಿ ಗಡಿ ದಾಟಬಹುದು. ಅಲ್ಲದೆ, ಒಂದೊಮ್ಮೆ ಅವರು ಬೇರೆ ರೋಗಗಳಿಂದಲೂ ಬಳಲುತ್ತಿದ್ದರೆ ಅದರ ವೆಚ್ಚಪ್ರತ್ಯೇಕ. ಅಷ್ಟೇ ಅಲ್ಲ, ರೋಗ ತೀವ್ರತೆ ಹೆಚ್ಚಾಗದೇ ಹೋದರೂ, ರೋಗಿಯನ್ನು 14 ದಿನಗಳ ಬಳಿಕವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಕೇರಳದಲ್ಲಿನ ಚಿಕಿತ್ಸಾ ಕ್ರಮ ಮತ್ತು ವೆಚ್ಚವನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.

1. ಫ್ಲುಯಿಡ್ ಟೆಸ್ಟ್​ - ಶಂಕಿತ ಸೋಂಕು ಪೀಡಿತನ ಫ್ಲುಯಿಡ್ ಮಾದರಿಯ ಪರೀಕ್ಷೆಗೆ ಗರಿಷ್ಠ 4,500 ರೂಪಾಯಿ ವೆಚ್ಚವಾಗುತ್ತದೆ. ಟೆಸ್ಟಿಂಗ್ ಕಿಟ್​ನ ಬೆಲೆಯೇ 3,000 ರೂಪಾಯಿ ಇದೆ.

2. ಆ್ಯಂಬುಲೆನ್ಸ್- ಒಂದೊಮ್ಮೆ COVID19 ಸೋಂಕು ಖಚಿತವಾದರೆ ಆತ/ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಬೇಕಾಗುತ್ತದೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ.

3. ಆ್ಯಂಟಿಬಯೋಟಿಕ್ಸ್​ - ಡೋಸೇಜ್​ ಆಧರಿಸಿ ಆ್ಯಂಟಿಬಯೋಟಿಕ್ಸ್​ನ ವೆಚ್ಚ ನಿಗದಿಯಾಗುತ್ತದೆ. ಬಹುತೇಕ ಜನರಿಗೆ ಮಾರುಕಟ್ಟೆಯಲ್ಲಿ ಈಗಾಗಲೇ ಕೊಟ್ಟಿರುವ ಆ್ಯಂಟಿಬಯೋಟಿಕ್ಸ್​ಗೆ 1,000 ರೂಪಾಯಿ ಬೆಲೆ ಇದೆ.

4. ಐಸಿಯು - ಸೋಂಕು ಪೀಡಿತನ/ಳ ಪರಿಸ್ಥಿತಿ ಗಂಭೀರವಾದ ಸಂದರ್ಭದಲ್ಲಿ ಅವರನ್ನು ವೆಂಟಿಲೇಟರ್ ಸೌಕರ್ಯವಿರುವ ಐಸಿಯುಗೆ ಸ್ಥಳಾಂತರಿಸಲಾಗುತ್ತದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಕರ್ಯಕ್ಕೆ 20,000 ರೂಪಾಯಿಯಿಂದ 25,000 ರೂಪಾಯಿ ದರ ಇದೆ. ರೋಗಿ ಡಿಸ್​ಚಾರ್ಜ್​ ಆಗುವ ತನಕದ ರೂಮ್ ರೆಂಟ್​ ಇಲ್ಲಿ ಪ್ರತ್ಯೇಕವಾಗಿರುತ್ತದೆ.

5. ಪಿಪಿಇ ಕಿಟ್​ - ಐಸಿಯುನಲ್ಲಿ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್​ಮೆಂಟ್ ಕಿಟ್​ಗಳು ಡಾಕ್ಟರ್​ಗಳು ಮತ್ತು ಇತರರ ಬಳಕೆಗಾಗಿ ಬೇಕಾಗಿದ್ದು, ಇದು 600 ರೂಪಾಯಿಯಿಂದ 1,000 ರೂಪಾಯಿ ತನಕ ಆಗುತ್ತದೆ. ಬಳಕೆ ನಂತರ ಪ್ರತಿ ನಾಲ್ಕು ಗಂಟೆಗೊಮ್ಮೆ ಇವುಗಳನ್ನು ನಿರ್ದೇಶಿತ ಮಾದರಿಯಲ್ಲೇ ನಾಶ ಮಾಡಬೇಕು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net