

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತ ಸಂಶೋಧನೆ ಸಂಸ್ಥೆ ಹಾಗೂ ನೆಫ್ರೋ ಯುರಾಲಜಿ ಸಂಸ್ಥೆಗಳ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯವಸ್ಥೆ ಸುಧಾರಣೆ ದೃಷ್ಟಿಯಿಂದ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಎರಡೂ ಸಂಸ್ಥೆಗಳ ಕುರಿತು ಮಾಹಿತಿ ನೀಡಿ, ಹೊಸ ಪ್ರಸ್ತಾವನೆಗಳ ಬಗ್ಗೆ ವಿವರಿಸಿದರೆಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.
ನೆಫ್ರೋ ಯುರಾಲಜಿ ಸಂಸ್ಥೆ ವಿಕೇಂದ್ರೀಕರಣವಾಗಬೇಕು, ಜಿಲ್ಲೆಗಳಲ್ಲೂ ಸೇವೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದುವರಿಯಿರಿ ಎಂದು ಸಿಎಂ ಸಲಹೆ ನೀಡಿದ್ದು, ಜಯದೇವ ಸಂಸ್ಥೆಯ ನಿರ್ದೇಶಕರನ್ನು ಆಯ್ಕೆ ಮಾಡಲು ಹೊಸದಾಗಿ ಅರ್ಜಿ ಆಹ್ವಾನಿಸಲು ನಿರ್ಧರಿಸಿದ್ದು, ಈ ವಾರದಲ್ಲೇ ಅರ್ಜಿ ಕರೆಯಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
50 ವರ್ಷ ಮೀರಿದ ಹೃದ್ರೋಗ ತಜ್ಞ ವೈದ್ಯರು ಅರ್ಜಿ ಸಲ್ಲಿಸಲು ಅವಕಾಶ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎನ್ನಲಾಗಿದೆ.
ನೆಫ್ರೋ ಯೂರಾಲಜಿ ಸಂಸ್ಥೆಗೆ ಸಂಬಂಧಿಸಿದಂತೆ ಖಾಯಂ ನಿರ್ದೇಶಕರಿಲ್ಲ, ಡಾ.ಕೇಶವಮೂರ್ತಿ ಪ್ರಭಾರ ಹುದ್ದೆಯಲ್ಲಿದ್ದಾರೆ. ಖಾಯಂ ನೇಮಕಕ್ಕೆ ಅರ್ಜಿ ಕರೆದಿದ್ದು, ಐವರು ಅರ್ಜಿ ಸಲ್ಲಿಸಿದ್ದರು. ಆಯ್ಕೆ ಸಮಿತಿ ಪರಿಶೀಲನೆ ನಡೆಸಿ ಮೂವರು ಅರ್ಹರಿರುವುದನ್ನು ಖಚಿತಪಡಿಸಿದೆ. ಈ ಮೂವರ ಪೈಕಿ ಡಾ.ಶಿವಲಿಂಗಯ್ಯ, ಡಾ.ಉಮೇಶ್ ಅವರನ್ನು ಆಯ್ಕೆ ಮಾಡಲು ಸಿಎಂ ಸೂಚಿಸಿದ್ದಾರೆನ್ನಲಾಗಿದೆ.
ಉಳಿದಂತೆ ಎರಡು ಸಂಸ್ಥೆಗಳು ಜನ ಸ್ನೇಹಿಯಾಗಬೇಕು. ಆಸ್ಪತ್ರೆಗೆ ಬರುವವರಿಗೆ ಮೊದಲು ಚಿಕಿತ್ಸೆ ನೀಡಬೇಕು, ನಂತರ ಕಾರ್ಡ್, ಯೋಜನೆಗಳ ಬಗ್ಗೆ ಪರಿಶೀಲಿಸಬೇಕು. ಇದು ನಮ್ಮ ಸರ್ಕಾರದ ನೀತಿಯಾಗಿದ್ದು, ತಕ್ಷಣದಿಂದ ಪಾಲಿಸಿ ಎಂದು ಸಿಎಂ ತಿಳಿಸಿದ್ದಾರೆ.
ಎರಡೂ ಸಂಸ್ಥೆಗಳು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು, ರೋಸ್ಟರ್ ಸಿಸ್ಟಂ ಅನುಸರಿಸಿದ್ದರ ಕುರಿತು ದಾಖಲೆ ಒದಗಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದು, ವಾರದ ಗಡುವು ನೀಡಿದ್ದಾರೆಂದು ತಿಳಿದುಬಂದಿದೆ. ಹಾಗೆಯೇ 10 ವರ್ಷ ಸೇವೆ ಸಲ್ಲಿಸಿದವರನ್ನು ಖಾಯಂ ಮಾಡಲು ನೇಮಕ ನಿಯಮಾವಳಿ ರೂಪಿಸುವುದಕ್ಕೂ ಸಲಹೆ ನೀಡಿದ್ದಾರೆ.