ಡೆಂಘೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ

mla meeting
ಶಿವಮೊಗ್ಗದಲ್ಲಿ ಡೆಂಘೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್.ಎನ್.ಚನ್ನಬಸಪ್ಪ ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದರು. ಡಾ. ನಟರಾಜ್, ಡಾ. ಕವಿತಾ ಯೋಗಪ್ಪನವರ್ ಇದ್ದರು.
Published on

ಶಿವಮೊಗ್ಗ: ಡೆಂಘೆ ಪ್ರಕರಣಗಳು ಪ್ರತಿದಿನ ಉಲ್ಬಣಗೊಳ್ಳುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಡೆಂಡೆಂಘೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಕರೊನಾ ಅವಧಿಯಲ್ಲಿ ಸಂಘಟಿತವಾಗಿ ಕೆಲಸ ಮಾಡಿದಂತೆ ಈಗಲೂ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಸಭಾಂಗಣದಲ್ಲಿ ಬುಧವಾರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಪರಿಸ್ಥಿತಿ ಕೈ ಮೀರದಂತೆ, ಸಾವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ನಾಗರಿಕರ ಆರೋಗ್ಯ ಮತ್ತು ಜೀವ ರಕ್ಷಣೆ ನಮ್ಮ ಹೊಣೆ ಎಂದರು.
ನಗರದ 35 ವಾರ್ಡ್‌ಗಳಲ್ಲೂ ಫಾಗಿಂಗ್ ನಡೆಸಬೇಕು. ಪಾಲಿಕೆ ಆಯುಕ್ತರು ಈ ವಿಚಾರದಲ್ಲಿ ಮುತುವರ್ಜಿಯಿಂದ ಕೆಲಸ ಮಾಡಬೇಕು. ಆರೋಗ್ಯದ ವಿಷಯದಲ್ಲಿ ಹಣದ ಬಗ್ಗೆ ಹೆಚ್ಚು ಚಿಂತೆ ಮಾಡಬಾರದು. ಸಾವುಗಳು ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಮನೆಮನೆಗಳಿಗೆ ತೆರಳಿ ಲಾರ್ವಾ ಸರ್ವೇ ಮಾಡಲು ಸ್ವಯಂಸೇವಕರು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಇದಕ್ಕೆ ಸೂಕ್ತ ವ್ಯವಸ್ಥೆ ಮಾಡಬೇಕು. ಮಹಿಳಾ ಸಂಘ, ಕನ್ನಡ ಯುವಕರ ಸಂಘ, ಗಣಪತಿ ಸಂಘಟನೆಗಳು, ವಿವಿಧ ಸಂಸ್ಥೆಗಳ ಸಭೆ ಕರೆದು ಸಹಕಾರ ಕೋರಬೇಕು ಎಂದು ತಿಳಿಸಿದರು.
ಡಿಎಚ್‌ಒ ಡಾ. ನಟರಾಜ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ 471 ಜನರಿಗೆ ಡೆಂಘೆ ಪರೀಕ್ಷೆ ಮಾಡಲಾಗಿದೆ. 54 ಪಾಸಿಟಿವ್ ಕಂಡು ಬಂದಿದೆ. ಪಾಸಿಟಿವ್ ಬಂದ ಪ್ರದೇಶಗಳಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದರು.
ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಿದ್ದನಗೌಡ ಪಾಟೀಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net