ಶಕ್ತಿ' ಫಲವಾಗಿ ಅರ್ಧ ಸಂಬಳ ಗ್ಯಾರಂಟಿ; ಮುಂದೇನು ಕಾದಿದೆಯೋ !?

basavaraj bommai
Published on

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಮೊತ್ತ ಕಾದಿರಿಸಿದ್ದೇವೆ. ಅಭಿವೃದ್ಧಿಗೂ ಅಡ್ಡಿಯಿಲ್ಲ, ಗ್ಯಾರಂಟಿ ಯೋಜನೆಗಳಿಗೂ ತೊಂದರೆಯಿಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಆರಂಭಿಕ ಹಂತದಲ್ಲೇ ಹುಸಿಯಾಗಿದೆ. ‘ಶಕ್ತಿ’ ಗ್ಯಾರಂಟಿ ಯೋಜನೆ ಫಲವಾಗಿ ಸಾರಿಗೆ ಸಿಬ್ಬಂದಿಗೆ ಅರ್ಧ ಸಂಬಳ ಗ್ಯಾರಂಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬುಧವಾರ ಸಂದೇಶ ಹಂಚಿಕೊಂಡಿರುವ ಅವರು, ಯೋಜನೆ ಜಾರಿಯಾದ ಮೊದಲ ತಿಂಗಳಿನಿಂದಲೇ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆ ಎಳೆದಿದೆ ಎಂದು ಟೀಕಿಸಿರುವ ಅವರು, ನಿಗಮದ ನೌಕರರ ಸಂಕಷ್ಟ ಪರಿಸ್ಥಿತಿಗೆ ಮಿಡಿದಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಪೂರ್ಣ ಹಣ ಒದಗಿಸಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯು ಹುಸಿಯಾಗಿದೆ. ಮುಂಬರುವ ತಿಂಗಳಲ್ಲಿ ನಿಗಮಗಳ ಬಸ್‌ಗಳು ಡೀಸೆಲ್ ಇಲ್ಲದೆ ನಿಲ್ಲುವ ಪರಿಸ್ಥಿತಿ ತಲೆದೋರಬಹುದು. ಸಾರಿಗೆ ನೌಕರರು ಸಂಬಳವಿಲ್ಲದೆ ದುಡಿಮೆ, ಕೆಟ್ಟ ಬಸ್‌ಗಳು ರಸ್ತೆಯಲ್ಲಿ ನಿಲ್ಲುವ ದಿನಗಳು ದೂರವಿಲ್ಲ ಎಂದು ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ‘ಶಕ್ತಿ’ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ಸಾರಿಗೆ ನಿಗಮಗಳ ಆದಾಯವೂ ಹೆಚ್ಚಿದೆ. ಪ್ರವಾಸೋದ್ಯಮ, ಆತಿಥ್ಯ ವಲಯ ಇನ್ನಿತರ ಚಟುವಟಿಕೆಗಳು ಹೆಚ್ಚಿ, ಜನರ ಆರ್ಥಿಕತೆ ವೃದ್ಧಿಗೆ ಸಹಕಾರಿಯಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net