ಮುಗಿದ ಸಾರ್ವತ್ರಿಕ ವರ್ಗಾವಣೆ; ಕೆಲ ಇಲಾಖೆಯಲ್ಲಿ ಇನ್ನೂ ನಡೆದಿದೆ ಕಸರತ್ತು

Doctors
Published on

ಬೆಂಗಳೂರು:

ಸರ್ಕಾರದ ಎಲ್ಲಾ ಇಲಾಖೆ ಮತ್ತು ನಿಗಮ ಮಂಡಳಿಗಳಲ್ಲಿನ ಸಾರ್ವತ್ರಿಕ ವರ್ಗಾವಣೆ ಮುಗಿದಿದ್ದು, ಕೆಲ ಇಲಾಖೆಯಲ್ಲಿ ತಾಂತ್ರಿಕ ಕಾರಣಕ್ಕಾಗಿ ಕೆಲ ಸಮಸ್ಯೆಗಳು ಎದುರಾಗಿವೆ.

ಪ್ರಥಮ ಬಾರಿಗೆ ಕೌನ್ಸಿಲಿಂಗ್ ಅಳವಡಿಸಿಕೊಂಡ ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯ ಸಮಸ್ಯೆಗಳಿಲ್ಲ. ಎಲ್ಲವೂ ನಿಯಮಾನುಸಾರ ನಡೆಯುತ್ತಿದ್ದು, ಪತಿ ಮತ್ತು ಪತ್ನಿ ಪ್ರಕರಣಗಳಿಗೆ ಒತ್ತು ನೀಡಲಾಗಿದೆ. ಪೊಲೀಸ್ ಇಲಾಖೆಯಲ್ಲಿಯೂ ತೀವ್ರ ಒತ್ತಡ ಇದ್ದರೂ, ಇತಿ ಮಿತಿಯಲ್ಲಿ ವರ್ಗವಣೆಯನ್ನು ಮುಗಿಸಲಾಗಿದೆ. ಇನ್ನು ಉನ್ನತ ಮಟ್ಟದ ಅಧಿಕಾರಿಗಳ ವರ್ಗಾವಣೆಯನ್ನು ಗೃಹ ಸಚಿವರು ಮತ್ತು ಸಿಎಂ ಹಂತದಲ್ಲಿಯೇ ಅಂತಿಕ ಅಂಕಿತ ಹಾಕಲಾಗಿದೆ.

ಲೋಕೋಪಯೋಗಿ ಇಲಾಖೆ ಮತ್ತು ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆಯಲ್ಲಿ ಎಂಜಿನೀಯರ್ ಹುದ್ದೆಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಅದನ್ನು ಒಂದು ಹಂತದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಮನ್ವಯತೆ ಸಾಧಿಸುವ ಮೂಲಕ ಪೂರ್ಣಗೊಳಿಸಲಾಗಿದೆ.

ಹೊಸದಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡುವ ಪದ್ದತಿಯನ್ನು ಅಳವಡಿಸಿಕೊಂಡಿರುವ ಆರೋಗ್ಯ ಇಲಾಖೆಯಲ್ಲಿ ವೈದ್ಯರ ವರ್ಗಾವಣೆಗೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗಿವೆ.

ಬಹಳ ವರ್ಷಗಳಿಂದ ಒಂದೇ ಕಡೆಯಲ್ಲಿರುವ ಇರುವ ವೈದ್ಯರನ್ನು ಮುಲಾಜಿಲ್ಲದೆ ಬೇರೆ ಕಡೆಯಲ್ಲಿ ವರ್ಗಾವಣೆ ಮಾಡಬೇಕು ಎನ್ನುವ ಸೂಚನೆ ಮೇರೆಗೆ ವರ್ಗ ಮಾಡಿರುವುದರಲ್ಲಿ ಹಲವು ಲೋಪದೋಷಗಳು ಕಂಡುಬಂದಿವೆ.

ಪತಿ ಮತ್ತು ಪತ್ನಿ ಪ್ರಕರಣದಲ್ಲಿಯೂ ಕನಿಷ್ಠ ಮಾನವೀಯತೆಯನ್ನು ಅನುಸರಿಸಿದೆ, ಅವರಿಗೆ ಹತ್ತಿರದ ಸ್ಥಳಗಳನ್ನು ತೋರಿಸದೆ ದೂರಕ್ಕೆ ವರ್ಗಾವಣೆ ಮಾಡಿರುವ ಬಗ್ಗೆ ವೈದ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಾಲೂಕು ಕೇಂದ್ರದಲ್ಲಿ ಕೆಲ ವೈದ್ಯರು ಉತ್ತಮ ಹೆಸರು ಸಂಪಾದನೆ ಮಾಡಿದ್ದು, ಅವರ ಪರವಾಗಿ ಶಾಸಕರು ಮತ್ತು ಸಚಿವರುಗಳು ವಕಾಲತ್ತು ವಹಿಸಿದ್ದು, ಅಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಮತ್ತು ಸಚಿವರ ಪತ್ರ ಹಿಡಿದು ಆರೋಗ್ಯ ಇಲಾಖೆಗೆ ಓಡಾಡಿದರೂ ಅದಕ್ಕೆ ಅಧಿಕಾರಿಗಳು ಮನ್ನಣೆ ನೀಡಿಲ್ಲ. ಈ ಬಗ್ಗೆ ದೂರು ಹೊತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಳಿ ಹೋದಾಗಲೂ ಅವರೂ ಕೂಡ ಅಸಾಹಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಕೊನೆಯ ಹಂತದಲ್ಲಿ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಕಾರ್ಯದರ್ಶಿ ಹರ್ಷಗುಪ್ತ ಅವರು, ಕೌನ್ಸಿಲಿಂಗ್ ಹಂತದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಕೆಲ ವೈದ್ಯರಿಗೆ ಭರವಸೆ ನೀಡಿದ್ದಾರೆ. ಆದರೆ ಈ ಎಲ್ಲಾ ಬೆಳವಣಿಗೆಯ ನಡುವೆ, ಭರವಸೆ ಕಾರ್ಯರೂಪಕ್ಕೆ ಬರುತ್ತದೊ ಇಲ್ಲವೋ ಎನ್ನುವ ಆತಂಕದಿಂದ ವೈದ್ಯರು ಜಾತಕ ಪಕ್ಷಿಗಳಂತೆ ಕಾಯ್ದು ಕುಳಿತಿದ್ದಾರೆ.

ಆಯಾ ಇಲಾಖೆಯಲ್ಲಿ ಶೇ.6 ಮೀರದಂತೆ ಸಾರ್ವತ್ರಿಕ ವರ್ಗಾವಣೆ ಮಾಡಬೇಕು ಎನ್ನುವ ನಿಯಮಾವಳಿ ಪಾಲನೆ ಮಾಡಿಯೇ ವರ್ಗಾವಣೆ ಮಾಡಲಾಗಿದೆ. ಇನ್ನು ಹೆಚ್ಚುವರಿ ವರ್ಗಾವಣೆ ಪ್ರಕರಣಗಳನ್ನು ಮುಖ್ಯಮಂತ್ರಿಗಳ ಅನುಮೋದನೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರದ ಹಂತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net