ಎಸಿಪಿ ಭರತ್ ರೆಡ್ಡಿ ವರ್ಗಾವಣೆ ರದ್ದು

police
Published on

ಬೆಂಗಳೂರು: ಮಾಜಿ ಸಂಸದ ಡಿ.ಕೆ. ಸುರೇಶ್ ಸಹೋದರಿ ಎಂದು ಹೇಳಿಕೊಂಡು ಚಿನ್ನಾಭರಣ ವ್ಯಾಪಾರಿಗಳಿಗೆ ವಂಚನೆ ಪ್ರಕರಣದ ತನಿಖಾ ಉಸ್ತುವಾರಿ ಎಸಿಪಿ ಭರತ್ ರೆಡ್ಡಿ ವರ್ಗಾವಣೆ ಆದೇಶವನ್ನು ಸೋಮವಾರ ಸರ್ಕಾರ ರದ್ದುಗೊಳಿಸಿದೆ.

ಆರೋಪಿಗಳಾದ ಐಶ್ವರ್ಯ ಗೌಡ ದಂಪತಿ ವಿರುದ್ಧ ತನಿಖೆ ನಡೆಯುತ್ತಿರುವ ತನಿಖಾ ಉಸ್ತುವಾರಿ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿಯನ್ನು ದಿಢೀರ್ ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು. ಕೊನೆಗೆ ಭರತ್ ರೆಡ್ಡಿ ವರ್ಗಾವಣೆ ರದ್ದುಗೊಳಿಸಿ ಅದೇ ಸ್ಥಾನದಲ್ಲೇ ಮುಂದುವರಿಸಿ ಆದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರು ದುರ್ಬಳಕೆ ಮಾಡಿಕೊಂಡು ಚಿನ್ನಾಭರಣ ವ್ಯಾಪಾರಿಗಳಿಗೆ ಕೋಟ್ಯಂತರ ರೂ. ವಂಚಿಸಿದ್ದ ಆರೋಪವು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಐಶ್ವರ್ಯಗೌಡ ವಿರುದ್ಧ ಕೇಳಿ ಬಂದಿದೆ.

ಈ ಬಗ್ಗೆ ಚಂದ್ರಾ ಲೇಔಟ್, ರಾಜರಾಜೇಶ್ವರಿನಗರ ಮತ್ತು ಮಂಡ್ಯ ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಆಕೆಯನ್ನು ಎರಡು ಬಾರಿ ಪೊಲೀಸರು ಬಂಧಿಸಿದ್ದರು. ಹೈಕೋರ್ಟ್ ಮಧ್ಯಂತರ ಜಾಮೀನು ಸಿಕ್ಕಿದ ಬಳಿಕ ಐಶ್ವರ್ಯ ಬಂಧ ಮುಕ್ತಳಾಗಿದ್ದಳು.

ಆಕೆಯ ಮನೆ ಮೇಲೆ ದಾಳಿ ನಡೆಸಿ 29 ಕೆಜಿ ಬೆಳ್ಳಿ ಹಾಗೂ ಮೂರು ಐಷರಾಮಿ ಕಾರುಗಳನ್ನು ಜಪ್ತಿ ಮಾಡಿದ್ದರು. ಪ್ರಕರಣವು ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆಗ್ರಾಸವಾಗಿರುವ ಹೊತ್ತಿನಲ್ಲೇ ಎಸಿಪಿ ಭರತ್ ರೆಡ್ಡಿ ಅವರನ್ನು ಸರ್ಕಾರ ವರ್ಗಾಣೆಗೊಳಿಸಿತ್ತು. ಅವರ ಸ್ಥಳಕ್ಕೆ ಗುಪ್ತಚರ ದಳದ ಡಿವೈಎಸ್ಪಿ ಸಿ.ವಿ.ದೀಪಕ್ ನಿಯೋಜಿತರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net