

ಮನುಷ್ಯನು ಹಿಂದಿನ ಜನ್ಮದಲ್ಲಿ ದೇಹವನ್ನು ಬಿಡುವಾಗ ಯಾವ ಯಾವ ವಸ್ತುಗಳನ್ನು (ವಿಷಯಗಳನ್ನು) ಸ್ಮರಿಸುವನೋ ಆ ಸ್ಮರಣೆಗೆ ಪ್ರತ್ಯಭಿಜ್ಞಾ ಪ್ರತ್ಯಕ್ಷ ಅನ್ನುವರು. ಅದಕ್ಕೆ ಅನುಗುಣವಾದ ದೇಹ, ಮನ, ಬುದ್ಧಿಗಳನ್ನೇ ಅವನು ಮುಂದಿನ ಜನ್ಮದಲ್ಲಿ ಪಡೆಯಬೇಕಾದುದು ಪರಮಾತ್ಮನ ನಿಯಮವಾಗಿರುವಾಗ ಆ ನಿಯಮದಂತೆ ಮನುಷ್ಯನ ಮುಂದಣ ಭವಿಷ್ಯ ನಿರ್ವಣಗೊಳ್ಳುತ್ತದೆ. ಗೀತೆಯಲ್ಲಿ ಶ್ರೀಕೃಷ್ಣನ ಮಾತು ಕೇಳಿ:
ಯಂ ಯಂ ವಾಪಿ ಸ್ಮರನ್ಭಾವಂ ತ್ಯಜತ್ಯಂತೆ ಕಲೇವರಂ| ತಂ ತಮೇವೈತಿ ಕೌಂತೇಯ ಸದಾ ತದ್ಭಾವಭಾವಿತಃ|
ಅಂತ್ಯ ಕಾಲದಲ್ಲಿ ಯಾವುದನ್ನು ಸ್ಮರಿಸಿ ದೇಹ ಬಿಡುವನೋ ಅದೇ ಅವನ ಪುನರ್ಜನಕ್ಕೆ ಕಾರಣವಾಗುವದು. ಮಾನವರ ಪಾಪ-ಪುಣ್ಯಗಳು ಅವರವರ ಕ್ರಿಯೆಗೆ ಅನುಗುಣವಾಗಿ ನಡೆಯುತ್ತವೆ. ಒಳ್ಳೇ ಕಾರ್ಯ ಮಾಡಿದರೆ ಒಳ್ಳೆಯವನಾಗಿಯೂ, ಕೆಟ್ಟದ್ದನ್ನು ಮಾಡಿದರೆ ಕೆಟ್ಟವನಾಗಿಯೂ ಜನಿಸುತ್ತಾನೆ. ಅವರವರ ಕರ್ವದಿಗಳ ಮೇಲೆ ಅವರವರ ಮರುಜನ್ಮ ಅವಲಂಬಿಸಿಕೊಂಡಿರುತ್ತದೆ. ಈ ವಿಷಯವು ಎಲ್ಲರಿಗೂ ಸಮ್ಮತವೇ ಆಗಿದೆ, ಆದರೆ ಒಂದು ಪ್ರಶ್ನೆ ಹೀಗೆ ಬರಬಹುದು- ಪ್ರಪ್ರಥಮ ಸೃಷ್ಟಿಯಲ್ಲಿ ಮನುಷ್ಯನಿಗೆ ಹಿಂದಿನ ಕರ್ಮದ ಸಂಪರ್ಕವೇ ಇರುವದಿಲ್ಲ. ಆ ಸಮಯದಲ್ಲಿ ಉಪಾಸಕನಾದ ಜೀವನಿಗೆ ಕರ್ಮ ಸಂಬಂಧವೇ ಇಲ್ಲ, ಅಂದರೆ ಎಲ್ಲ ಜೀವರೂ ಪರಮಾತ್ಮನಂತೆ ಒಂದೇ ವಿಧವಾಗಿ ಸುಖಮಯವಾಗಿ ಇರಬೇಕಾಗಿತ್ತು. ಕೆಲವರು ದುಃಖಿಗಳು, ನಿರ್ಗತಿಕರು, ಕುರೂಪಿಗಳು, ಕೆಲವರು ರೋಗಿಗಳು, ಕೆಲವರು, ನಿರೋಗಿಗಳು, ಕೆಲವರು ಶ್ರೀಮಂತರು. ಕೆಲವರು ಬಡವರು, ಇನ್ನು ಕೆಲವರು ಅರೆ ಆಯುಷ್ಯವುಳ್ಳವರು, ಕೆಲವರು ದೀರ್ಘ ಆಯುಷ್ಯವುಳ್ಳವರು ಹೀಗೆ ಬೇರೆ ಬೇರೆ ವೈವಿಧ್ಯಗಳು ಮೊದಲ ಸೃಷ್ಟಿಯಲ್ಲಿ ಹೇಗಾದವು?
ಆಗ ಮನುಷ್ಯರಿಗೆ ಪುಣ್ಯ-ಪಾಪಗಳ ಸಂಬಂಧವೆ ಇಲ್ಲದಿರುವಾಗ ಸುಖ-ದುಃಖಗಳು ಹೇಗೆ ಉಂಟಾದವು? ಈ ಪ್ರಶ್ನೆಗೆ ಉತ್ತರವನ್ನು ಸೂತ್ರಖಂಡದಲ್ಲಿ ವಿವರಿಸಲಾಗಿದೆ. ಪ್ರಪ್ರಥಮ ಸೃಷ್ಟಿಯಲ್ಲಿ ಜೀವರು ವಾಸ್ತವವಾಗಿ ಬದ್ಧರಾಗಿದ್ದರೂ, ಪರಮಾತ್ಮನಂತೆ ಪರಿಶುದ್ಧ ಚೈತನ್ಯಮಯವಾಗಿದ್ದರೂ, ಮಾಯಾ ಶಕ್ತಿಯ ಪ್ರಭಾವದಿಂದ ಅಂದರೆ ಸತ್ವ, ರಜ, ತಮ ಗುಣಗಳ ವೈಷಮ್ಯದಿಂದ ಭಿನ್ನತೆ ಸಹಜವಾಗಿ ಉದ್ಭವವಾಯಿತು.