ನಿಶ್ಚಿತಾರ್ಥ ನಡೆದ ಐದೇ ನಿಮಿಷದಲ್ಲಿ ಭಾವಿ ಪತಿ ಸಾವು: ಕಿಸ್​ ಕೊಟ್ಟ ಮರುಕ್ಷಣವೇ ನಡೆಯಿತು ದುರಂತ!

Man Death
Published on

ಬ್ರಾಸಿಲಿಯಾ: ಸಂತೋಷದ ಹಿಂದೆಯೇ ಯಾರು ಊಹಿಸಿರದ ದುಃಖವಿರುತ್ತದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥ ನೆರವೇರಿಸಿಕೊಂಡ ಖುಷಿಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ತುಂಬಾ ಸಂಭ್ರಮದಲ್ಲಿದ್ದ ನವಜೋಡಿಗೆ ಮುಂದಿನ ಐದೇ ನಿಮಿಷದಲ್ಲಿ ವಿಧಿಯ ಕ್ರೂರ ದರ್ಶನವಾದಂತಹ ಮನಕಲಕುವ ಘಟನೆ ಇದು.

ಬ್ರೆಜಿಲ್​ನ ಬಿಸಿನೆಸ್​ ಮ್ಯಾನ್​ ಜಾವೋ ಗ್ಯುಲ್ಹೆರೆಮ್​ ಫಡಿನಿ (24) ಮತ್ತು ಭಾವಿ ಪತ್ನಿ ಲರಿಸ್ಸಾ ಕ್ಯಾಂಪೊಸ್​ (25) ಸಾವೋಪೋಲೊ ರಾಜ್ಯದ ಸೊರೊಕಬಾ ವಲಯದಲ್ಲಿ ಬರುವ ಪ್ರಖ್ಯಾತ ಇಟುಪರಾರಂಗ ಜಲಾಶಯದಲ್ಲಿ ತಮ್ಮ ಫ್ರೆಂಡ್ಸ್​ ಸಮ್ಮುಖದಲ್ಲಿ ನಿಶ್ಚಿತಾರ್ಥ ನೇರಿವೇರಿಸಿಕೊಂಡರು.

ಇದಾದ ಬೆನ್ನಲ್ಲೇ ತುಂಬಾ ಖುಷಿಯಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ನವಜೋಡಿ ಆರಂಭಿಸಿತು. ಆದರೆ, ಮುಂದೆ ಒಂದು ದೊಡ್ಡ ಆಘಾತವಿದೆ ಎಂಬ ಅರಿವು ಇಬ್ಬರಿಗೂ ಇರಲಿಲ್ಲ. ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ಮರುಕ್ಷಣವೇ ಜಾವೋ ತನ್ನ ಫ್ರೆಂಡ್ಸ್​ ಜತೆ ಸ್ವಿಮ್ಮಿಂಗ್​ ರೇಸ್​ಗೆಂದು ಡ್ಯಾಮ್​ಗೆ ಜಿಗಿದ. ನಂತರದ ಕೆಲವೇ ಕ್ಷಣಗಳಲ್ಲಿ ಜಾವೋ ನೀರಿನಿಂದ ಮಾಯವಾದ.

ಆಗಸ್ಟ್​ 31ರಂದು ಈ ಘಟನೆ ನಡೆದಿದ್ದು, ನೀರಿಗೆ ಹಾರುವ ಮುನ್ನ ಜಾವೋ ತನ್ನ ಭಾವಿ ಪತ್ನಿ ಲರಿಸ್ಸಾ ಹಣೆಗೆ ಪ್ರೀತಿಯ ಮುತ್ತಿಟ್ಟು, ಶರ್ಟ್​ ಕಳಚಿ ಜಲಾಶಯಕ್ಕೆ ಧುಮುಕ್ಕಿದ್ದ. ಆದರೆ, ಏನಾಯಿತೋ ಕಾಣೆ ಕೆಲವೇ ಕ್ಷಣಗಳಲ್ಲಿ ಮಾಯವಾದ ಜಾವೋಗಾಗಿ ಫ್ರೆಂಡ್ಸ್​ ಸಾಕಷ್ಟು ಹುಡುಕಾಡಿದರು. ಅದೇ ವೇಳೆಗೆ ತುರ್ತು ಸೇವೆ ಸಹ ಆಗಮಿಸಿ, ಮುಳುಗು ತಜ್ಞರು ಹಾಗೂ ದೋಣಿಯ ಸಹಾಯದಿಂದ ಹುಡುಕಾಡಲಾಯಿತು. ಆದರೆ, ಏನೂ ಪ್ರಯೋಜನ ಆಗಲಿಲ್ಲ.

ಇದರ ನಡುವೆ ಮೀನುಗಾರರನ್ನು ಬರ ಹೇಳಲಾಗಿತ್ತು. ಇನ್ನೇನು ಆತ ಬರಬೇಕೆನ್ನುವಷ್ಟರಲ್ಲಿ ಮುಳುಗು ತಜ್ಞರಿಗೆ ಜಾವೋ ಮೃತದೇಹ ಪತ್ತೆಯಾಯಿತು. ಭಾವಿ ಪತಿಯ ದೇಹ ನೋಡುತ್ತಿದ್ದಂತೆ ಲರಿಸ್ಸಾ ಆಕ್ರಂದನ ಮುಗಿಲು ಮುಟ್ಟಿತು. ಸಾಕಷ್ಟು ಕನಸು ಕಟ್ಟಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದ ಲರಿಸ್ಸಾ ಕನಸ್ಸು ಐದೇ ನಿಮಿಷದಲ್ಲಿ ನುಚ್ಚು ನೂರಾಯಿತು.

ನನ್ನನ್ನು ತುಂಬಾ ಪ್ರೀತಿಸುತ್ತಿದ್ದ. ಮದುವೆಗೂ ಸಹ ದಿನಾಂಕ ನಿಗದಿ ಮಾಡಲಾಗಿತ್ತು. ಇದೀಗ ನೆನಪುಗಳನ್ನು ಮಾತ್ರ ಬಿಟ್ಟು ಹೋಗಿದ್ದಾನೆಂದು ಲರಿಸ್ಸಾ ನೋವು ನುಂಗಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net