

ಬೆಂಗಳೂರು: ಪಠ್ಯ ಪುಸ್ತಕದಲ್ಲಿ ಸಂಚಾರ ನಿಯಮಗಳ ಕುರಿತು ಜಾಗೃತಿ ವಿಷಯಗಳನ್ನು ಅಳವಡಿಸಲು ಸಿದ್ಧತೆ ನಡೆದಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಸಂಚಾರ ಸಂಪರ್ಕ ದಿನ ಅಂಗವಾಗಿ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾಮಕ್ಕಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ 1ರಿಂದ 10ನೇ ತರಗತಿಗಳ ಮಕ್ಕಳಿಗೆ ಸಂಚಾರ ನಿಯಮಗಳ ಬಗ್ಗೆ ವಿಶೇಷ ಪಠ್ಯಕ್ರಮ ರಚಿಸಿದ್ದು, ಅದನ್ನು ಅಳವಡಿಸಿಕೊಳ್ಳುವುದಾಗಿ ಡಿಎಸ್‌ಇಆರ್‌ಟಿ ಭರವಸೆ ನೀಡಿದೆ.
30 ವರ್ಷಗಳಿಂದ ಸ್ಟೂಡೆಂಟ್ ಅಸೋಸಿಯೇಷನ್ ರೋಡ್ ಸೇಫ್ಟಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 1 ಗಂಟೆ ಕಾಲ ಜಾಗೃತಿ ಮೂಡಿಸುತ್ತಿದೆ. ಟ್ರಾಫಿಕ್ ಪಾರ್ಕ್‌ನಲ್ಲಿ ದಿನಕ್ಕೆ ಒಂದು ಶಾಲೆಯ 60 ಮಕ್ಕಳನ್ನು ಕರೆತಂದು 3 ಗಂಟೆಗೂ ಹೆಚ್ಚು ಕಾಲ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ದಟ್ಟಣೆ, ವ್ಹೀಲಿಂಗ್, ಪಾದಚಾರಿ ಮಾರ್ಗ ಒತ್ತುವರಿ, ಸರಕು ಸಾಗಣೆ ವಾಹನಗಳ ಬೇಕಾಬಿಟ್ಟಿ ಪಾರ್ಕಿಂಗ್ ಮತ್ತಿತರ ಸಮಸ್ಯೆಗಳನ್ನು ಆಯುಕ್ತರ ಬಳಿ ಹಂಚಿಕೊಂಡರು.
ಇದಕ್ಕೆ ಉತ್ತರಿಸಿದ ಅನುಚೇತ್, ನಗರ ವ್ಯಾಪ್ತಿಯ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದ್ದು, ಇದಕ್ಕೆ ಪೊಲೀಸರು ಸಹಕಾರ ನೀಡುತ್ತಿದ್ದಾರೆ. ಹಂತ ಹಂತವಾಗಿ ನಗರದ ಎಲ್ಲ ಪಾದಚಾರಿ ಮಾರ್ಗ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಪಶ್ಚಿಮ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ 16 ಮಂದಿ ಗ್ಯಾಂಗ್ ಅನ್ನು ಪತ್ತೆಹಚ್ಚಿ ಪರಿಶೀಲನೆ ನಡೆಸಿದಾಗ ಎಲ್ಲರೂ ಅಪ್ರಾಪ್ತರಾಗಿದ್ದಾರೆ. ಅವರ ಪಾಲಕರಿಂದ ಬಾಂಡ್‌ಒವರ್ ಪಡೆಯಲಾಗಿದೆ. ಮತ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡಿದರೆ ವಾಹನ ಜಪ್ತಿ ಮಾಡಲಾಗುತ್ತದೆ. ಬೈಕ್‌ಗಳಿಗೆ ಆಲ್ಟ್ರೇಷನ್ ಮಾಡುತ್ತಿದ್ದ ಗ್ಯಾರೇಜ್ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದರು.
ಪೀಣ್ಯ ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಜನದಟ್ಟಣೆ ಮುಖ್ಯ ಸಮಸ್ಯೆ ಆಗಿದೆ. ಬೆಳಗ್ಗೆ 8ರಿಂದ 9 ಮತ್ತು ಸಂಜೆ 5 ರಿಂದ 7.30ರವರೆಗೆ ಹೆಚ್ಚು ಟ್ರಾಫಿಕ್ ಇರಲಿದೆ. ಇದನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಪೀಣ್ಯ ಕೈಗಾರಿಕಾ ವಲಯಕ್ಕೆ ಬರುವ ಸರಕು ಲಾರಿಗಳನ್ನು ನೆಲಮಂಗಲ ಬಳಿಯೇ ತಡೆಯಲಾಗುತ್ತಿದೆ. ಪೀಣ್ಯ ಕೈಗಾರಿಕೆಗಳ ಬಿಲ್ ಹೊಂದಿರುವ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್‌ಗೆ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಂ. ಆರೀಫ್ ಮನವಿ ಮಾಡಿದರು.
ವ್ಹೀಲಿಂಗ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನವರು ಅಪ್ರಾಪ್ತರು ಆಗಿರುವ ಕಾರಣ ಪಾಲಕರಿಗೆ ದಂಡ ವಿಧಿಸಿ ಬಾಂಡ್ ಪಡೆಯುತ್ತಿದ್ದೇವೆ.
-ಬಿ. ದಯಾನಂದ್, ನಗರ ಪೊಲೀಸ್ ಆಯುಕ್ತ