ಟ್ರಾಫಿಕ್ ಪೊಲೀಸ್ ರಿಫ್ಲೆಕ್ಟರ್ ಕಟೌಟ್ ಕಳವು

Traffic police reflector cutout
ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿ ಅಳವಡಿಸಲಾಗಿದ್ದ ಟ್ರಾಫಿಕ್ ಪೊಲೀಸ್ ಕಟೌಟ್.
Published on

ಶಿವಮೊಗ್ಗ: ಸಾಗರ ರಸ್ತೆಯ ಡಿವೈಡರ್ ಮೇಲೆ ಸಂಚಾರ ಪೊಲೀಸ್ ನಿಂತಿರುವಂತಿದ್ದ ರಿಫ್ಲೆಕ್ಟರ್ ಕಟೌಟನ್ನು ಕಾರಿನಲ್ಲಿ ಬಂದ ನಾಲ್ವರು ಮಾ.16ರಂದು ತಡ ರಾತ್ರಿ ರಾತ್ರಿ ಹೊತ್ತೊಯ್ದಿದ್ದಾರೆ. ಕಳವು ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಾಗರ ರಸ್ತೆಯ ಮಹೀಂದ್ರ ಶೋ ರೂಂ ಎದುರು ‘ನಿಧಾನವಾಗಿ ಚಲಿಸಿ’ ಎಂಬ ಎಚ್ಚರಿಕೆ ಸಂದೇಶ ಸಾರುವ ಬೋರ್ಡ್ ಹಿಡಿದು ಸಂಚಾರ ಪೊಲೀಸ್ ನಿಂತಿರುವಂತಹ ರಿಫ್ಲೆಕ್ಟರ್ ಕಟೌಟನ್ನು ಮೂರು ತಿಂಗಳ ಹಿಂದೆ ಪೊಲೀಸ್ ಇಲಾಖೆ ಅಳವಡಿಸಿತ್ತು.

ಅಪಘಾತ ವಲಯ ಎಂದು ಗುರುತಿಸಲ್ಪಟ್ಟಿರುವ ನಗರದ ವಿವಿಧ ಸ್ಥಳದಲ್ಲಿ ಸವಾರರಿಗೆ ಜಾಗೃತಿ ಮೂಡಿಸಲು ಸಂಚಾರ ಠಣೆ ಪೊಲೀಸ್ ಸಿಬ್ಬಂದಿಯನ್ನು ಹೋಲುವ ರಿಫ್ಲೆಕ್ಟರ್ ಕಟೌಟ್ ಅಳವಡಿಸಿದ್ದರು. ರಿಫ್ಲೆಕ್ಟರ್ ಕಟೌಟ್ ಕಳ್ಳತನ ಮಾಡಿಕೊಂಡು ಹೋದವರ ವಿರುದ್ಧ ಈಗ ಸಾರ್ವಜನಿಕ ಆಸ್ತಿ ಹಾನಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐ ತಿರುಮಲೇಶ್ ದೂರಿನ ಮೇರೆಗೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿವು ರಿಫ್ಲೆಕ್ಟರ್ ಕಟೌಟ್‌ಗಳು?

ಅಪಘಾತಗಳ ತಡೆ ಹಾಗೂ ಮಿತಿಮೀರಿದ ವೇಗದಲ್ಲಿ ಆಗಮಿಸುವ ವಾಹನಗಳ ಸಂಚಾರ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸರು ತಮ್ಮ ಠಾಣಾ ವ್ಯಾಪ್ತಿ ರಾಷ್ಟ್ರೀಯ ಹೆದ್ದಾರಿಗಳ ಅಪಘಾತ ವಲಯಗಳಲ್ಲಿ ಟ್ರಾಫಿಕ್ ಪೊಲೀಸ್ ಚಿತ್ರವಿದ್ದ ಹಾಗೂ ಗೋ ಸ್ಲೋ (ನಿಧಾನವಾಗಿ ಚಲಿಸಿ) ಎಂಬ ಸಂದೇಶವಿರುವ ರಿಫ್ಲೆಕ್ಟರ್ ಕಟೌಟ್‌ಗಳನ್ನು ಹಲವಡೆ ಅಳವಡಿಸಿದ್ದರು. ಗಾಡಿಕೊಪ್ಪದ ಮಹೀಂದ್ರ ಶೋ ರೂಂ ಬಳಿ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿಯೂ ಕಟೌಟ್ ಹಾಕಿದ್ದರು. ವಾಹನ ದಟ್ಟಣೆ ಹೆಚ್ಚಿರುವ ಮತ್ತು ಅಪಘಾತ ವಲಯ ಸರ್ಕಲ್ ಹಾಗೂ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್ ಕಟೌಟ್‌ಗಳನ್ನು ಅಳವಡಿಸುವ ಮೂಲಕ ವಾಹನ ಚಾಲಕರ ಗಮನ ಸೆಳೆಯುವ ವಿನೂತನ ಕ್ರಮಕ್ಕೆ ಖಾಕಿ ಪಡೆ ಮುಂದಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net