ಕಿರಿದಾದ ರಸ್ತೆಯಲ್ಲಿ ಸಂಚಾರ ಅಸಾಧ್ಯ!

14.. Pyp..03
ಪಿರಿಯಾಪಟ್ಟಣದ ಬಸವೇಶ್ವರ ವೃತ್ತದಿಂದ ಹಾಸನ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿ ವಾಹನಗಳ ಓಡಾಟಕ್ಕೆ ತೊಂದರೆಯಾಗಿರುವುದು.
Published on

ಪಿರಿಯಾಪಟ್ಟಣ: ಪಟ್ಟಣದ ಬಸವೇಶ್ವರ ವೃತ್ತದಿಂದ ಬೆಟ್ಟದಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ವಿಸ್ತರಣೆಯಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ಬಸವೇಶ್ವರ ವೃತ್ತ ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಜಂಕ್ಷನ್ ಆಗಿದೆ. ಗೋಣಿಕೊಪ್ಪ-ವಿರಾಜಪೇಟೆ, ಕುಶಾಲನಗರ - ಮಡಿಕೇರಿ, ಅರಕಲಗೂಡು-ಹಾಸನ ಮತ್ತು ಹುಣಸೂರು -ಮೈಸೂರಿಗೆ ತೆರಳುವ ವಾಹನಗಳಿಗೆ ಪ್ರಮುಖ ಜಂಕ್ಷನ್ ಇದಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಅರಕಲಗೂಡು -ಹಾಸನ ರಸ್ತೆಯನ್ನು ಹೊರತುಪಡಿಸಿ ಉಳಿದೆಲ್ಲ ರಸ್ತೆಗಳು ಚತುಷ್ಪಥ ರಸ್ತೆಗಳಾಗಿದ್ದು ಇಲ್ಲಿ ವಾಹನಗಳ ಏಕಮುಖ ಸಂಚಾರಕ್ಕೆ ಉತ್ತಮವಾದ ವ್ಯವಸ್ಥೆ ಇದೆ. ಆದರೆ ಹಾಸನ ರಸ್ತೆ ವಿಸ್ತರಣೆಯಾಗದ ಕಾರಣ ಕಿರಿದಾಗಿರುವುದರಿಂದ ಬಸವೇಶ್ವರ ವೃತ್ತದಿಂದ ಹಾಸನದ ಕಡೆಗೆ ತೆರಳುವ ವಾಹನಗಳು ಮತ್ತು ಹಾಸನ ಕಡೆಯಿಂದ ಪಟ್ಟಣಕ್ಕೆ ಬರುವ ವಾಹನಗಳು ಕಿರಿದಾದ ರಸ್ತೆಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇದೆ.

ವಾಹನಗಳ ದಟ್ಟಣೆ ಉಂಟಾದಾಗ ರಸ್ತೆ ದಾಟಲು ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಇದೆ. ಬಸ್ ಡಿಪೋ, ತಂಬಾಕು ಹರಾಜು ಮಾರುಕಟ್ಟೆ, ತಾಲೂಕು ಕ್ರೀಡಾಂಗಣ, ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಐಟಿಐ ಕಾಲೇಜು ಸೇರಿದಂತೆ ಬಹುತೇಕ ಶಿಕ್ಷಣ ಸಂಸ್ಥೆಗಳು ಇದೇ ರಸ್ತೆಯಲ್ಲಿ ಇದ್ದು ವಾಹನಗಳ ಓಡಾಟವೂ ಹೆಚ್ಚು ಇರುತ್ತದೆ. ಕಿರಿದಾದ ರಸ್ತೆಯಲ್ಲಿ ವಾಹನಗಳ ನಿಲುಗಡೆಗೂ ಸೂಕ್ತ ಅವಕಾಶ ಇರುವುದಿಲ್ಲ. ಪರಿಣಾಮ ರಸ್ತೆ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಎದುರಾಗಿದೆ. ಮತ್ತೊಂದೆಡೆ ದೊಡ್ಡ ವಾಹನಗಳು ಸಂಚರಿಸಲು ಪರದಾಡುವಂತಿದ್ದು, ಇವುಗಳ ನಡುವೆ ಸಾರ್ವಜನಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರು ರಸ್ತೆ ದಾಟಲು ಹರಸಾಹಸಪಡಬೇಕಿದೆ.

ಕೆ.ವೆಂಕಟೇಶ್ 2017ರಲ್ಲಿ ಶಾಸಕರಾಗಿದ್ದಾಗ ಹಾಸನದಿಂದ ಆನೆ ಚೌಕೂರು ಗೇಟ್‌ವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಬಸವೇಶ್ವರ ವೃತ್ತದಿಂದ ಗೋಣಿಕೊಪ್ಪ ರಸ್ತೆಯಲ್ಲಿರುವ ಕೊಡಗು ಗೌಡ ಸಮಾಜದವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಯಿತು. ಆದರೆ ಬಸವೇಶ್ವರ ವೃತದಿಂದ ಹಾಸನ ರಸ್ತೆಯಲ್ಲಿರುವ ಹರವೆ ಮಲ್ಲರಾಜಪಟ್ಟಣದವರೆಗೆ ಚತುಷ್ಪತ ರಸ್ತೆ ನಿರ್ಮಿಸುವಂತೆ ಸಾರ್ವಜನಿಕರಿಂದ ಬೇಡಿಕೆ ಬಂದಿತ್ತಾದರೂ ಅಂದು ಶಾಸಕರು ಮನಸ್ಸು ಮಾಡಲಿಲ್ಲ. ಕಳೆದ ಐದಾರು ವರ್ಷಗಳಲ್ಲಿ ಈ ರಸ್ತೆಯು ಪ್ರಮುಖ ವಾಣಿಜ್ಯ ರಸ್ತೆಯಾಗಿ ಅಭಿವೃದ್ಧಿಯಾಗಿದ್ದು ವಾಹನಗಳ ಓಡಾಟ ಹಿಂದೆಂದಿಗಿಂತಲೂ ಹೆಚ್ಚಿದೆ.

ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಸೂಕ್ತ ಚರಂಡಿ ನಿರ್ಮಾಣ ಮಾಡದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ರಸ್ತೆ ಪೂರ ನೀರು ನಿಲ್ಲುವ ಪರಿಸ್ಥಿತಿ ಇದ್ದು, ಚರಂಡಿ ಮರು ನಿರ್ಮಾಣದ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಲು ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಬಸವೇಶ್ವರ ವೃತ್ತದಿಂದ ಹಾಸನ ಕಡೆಗೆ ವಾಹನಗಳು ತಿರುಗುವ ಜಾಗದಲ್ಲಿ ತಾತ್ಕಾಲಿಕವಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು ರಸ್ತೆಯನ್ನು ವಿಭಜಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಈ ಮಾರ್ಗವಾಗಿ ಬಸ್ ಡಿಪೋಗೆ ಮತ್ತು ಹಾಸನ ಮಾರ್ಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು, ತಂಬಾಕು ಹರಾಜು ಮಾರುಕಟ್ಟೆಗೆ ತೆರಳುವ ಲಾರಿಗಳು ಕಿರಿದಾದ ರಸ್ತೆಯಲ್ಲಿ ಚಲಿಸುವ ಸಂದರ್ಭದಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತದೆ.

ಮುಂಜಾನೆ 8ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ 7 ವರೆಗೆ ಬಸವೇಶ್ವರ ವೃತ್ತದ ಮೂಲಕ ಹೆಚ್ಚು ವಾಹನಗಳು ಹಾದು ಹೋಗಲಿದ್ದು, ಇದರಿಂದಾಗಿಯೂ ವಾಹನಗಳ ದಟ್ಟಣೆ ನಿತ್ಯ ಇರುತ್ತದೆ. ಈ ಸಂದರ್ಭದಲ್ಲಿ ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿ ಬಸವೇಶ್ವರ ವೃತ್ತದವರೆಗೂ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇರುತ್ತದೆ. ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕಾದ ಟ್ರಾಫಿಕ್ ಪೊಲೀಸರು ಹೈರಾಣಾಗಿರುತ್ತಾರೆ. ಪುರಸಭೆ ವ್ಯಾಪ್ತಿಯ ಹರವೆ ಮಲ್ಲರಾಜಪಟ್ಟಣದ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾದಲ್ಲಿ ಈ ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲಿದ್ದು ಸಾರ್ವಜನಿಕರು ನೆಮ್ಮದಿಯ ನಿಟ್ಟಿಸಿರು ಬಿಡಲಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಅಥವಾ ಸಚಿವ ಕೆ.ವೆಂಕಟೇಶ್ ರವರಾಗಲಿ ಇತ್ತ ಗಮನಹರಿಸಿ ಈ ಸಮಸ್ಯೆಯನ್ನು ಬಗೆಹರಿಸುವತ್ತ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಪಿ.ಪಟ್ಟಣದ ಬಸವೇಶ್ವರ ವೃತ್ತದಿಂದ ಹಾಸನ ರಸ್ತೆಯ ವದ್ಲಿವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಮಾಡುವಂತೆ ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಸ್ತೆ ವಿಸ್ತರಣೆಯಾದಲ್ಲಿ ಸಾರ್ವಜನಿಕರ ಓಡಾಡ, ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸಿ ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹೋಗುವಂತೆ ಚರಂಡಿ ನಿರ್ಮಿಸಲು 85 ಲಕ್ಷ ರೂ. ಬಿಡುಗಡೆಯಾಗಿದೆ. ಬಸವೇಶ್ವರ ವೃತ್ತದಿಂದ ಈಗಾಗಲೇ ಮೂರು ಮಾರ್ಗಗಳಲ್ಲಿ ಚತುಷ್ಪಥ ರಸ್ತೆ ನಿರ್ಮಾಣವಾಗಿದ್ದು, ಇದೊಂದು ಮಾರ್ಗ ಮಾತ್ರ ಹಾಗೆಯೇ ಉಳಿದಿದೆ. ಕಿರಿದಾದ ರಸ್ತೆಯಿಂದಾಗಿ ಉಳಿದ ಮಾರ್ಗಗಳಲ್ಲೂ ವಾಹನಗಳ ದಟ್ಟಣೆ ಹೆಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಚಿವ ಕೆ.ವೆಂಕಟೇಶ್ ಕೂಡಲೇ ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು.
> ಮಂಜುನಾಥ ಸಿಂಗ್, ಪುರಸಭೆ ಮಾಜಿ ಅಧ್ಯಕ್ಷ, ಪಿರಿಯಾಪಟ್ಟಣ

ಪಿರಿಯಾಪಟ್ಟಣ-ಬೆಟ್ಟದಪುರ ರಸ್ತೆ ಇತ್ತೀಚಿನ ದಿನಗಳಲ್ಲಿ ಪ್ರಮುಖ ವಾಣಿಜ್ಯ ರಸ್ತೆಯಾಗಿ ಮಾರ್ಪಾಡಾಗುತ್ತಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳ ಅಂಗಡಿಗಳು, ಕಲ್ಯಾಣ ಮಂಟಪಗಳು, ಶೈಕ್ಷಣಿಕ ಸಂಸ್ಥೆಗಳು ಈ ರಸ್ತೆಯಲ್ಲಿಯೇ ಇರುವುದರಿಂದ ನಿತ್ಯವೂ ಸಾರ್ವಜನಿಕರ ಓಡಾಟ ಹೆಚ್ಚುತಿದೆ. ಕಿರಿದಾದ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಉಂಟಾಗುವ ಸಮಸ್ಯೆಗಳಿಂದ ವಿದ್ಯಾರ್ಥಿಗಳು, ಮಹಿಳೆಯರು, ಮಕ್ಕಳು, ವೃದ್ಧರು ತೊಂದರೆ ಅನುಭವಿಸುವಂತಾಗಿದೆ. ಪುರಸಭಾ ವ್ಯಾಪ್ತಿವರೆಗಾದರೂ ಈ ರಸ್ತೆ ವಿಸ್ತರಣೆಯಾಗಬೇಕು ಹಾಗೂ ಚತುಷ್ಪಥ ರಸ್ತೆಯಾಗಬೇಕು. ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಪ್ರತ್ಯೇಕ ಸ್ಥಳದ ವ್ಯವಸ್ಥೆಯಾಗಬೇಕು.
ಆಶಾ ಮಹದೇವ ರಾವ್ ಅಧ್ಯಕ್ಷೆ ಸ್ಫೂರ್ತಿ ಸ್ವಾವಲಂಬಿ ಟ್ರಸ್ಟ್, ಪಿರಿಯಾಪಟ್ಟಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net