ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಾಜಾರೋಷವಾಗಿ ಸಂಚರಿಸುವ ಸವಾರರಿಗೆ ಮಂಗಳೂರು ಸಂಚಾರಿ ಪೊಲೀಸರು ಈಗ ಸರಿಯಾಗಿಯೇ ಬಿಸಿ ಮುಟ್ಟಿಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯ (ಎಐ) ಹೈಟೆಕ್ ಕ್ಯಾಮೆರಾಗಳು ಹಾಗೂ ಇಂಟಲಿಜೆಂಟ್ ಟ್ರಾಫಿಕ್ ಮೆನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅಳವಡಿಸಿದ್ದರೂ ಸಹ, ನಮಗೂ ಕಾನೂನಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುವ ಸವಾರರ ವಿರುದ್ಧ ಪೊಲೀಸರು ಈಗ ರಸ್ತೆಗಿಳಿದು ಜಂಟಿ ಸಮರ ಸಾರಿದ್ದಾರೆ. ಕಳೆದ ಕೆಲವು ದಿನಗಳಿಂದ ನಗರದ ನಂತೂರು, ಕೆಪಿಟಿ, ಕಂಕನಾಡಿ, ಬೆಂದೂರ್‌ವೆಲ್, ಜ್ಯೋತಿ, ಮತ್ತು ಬಲ್ಮಠ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಪೊಲೀಸರ ನಿರಂತರ ತಪಾಸಣೆ ತೀವ್ರಗೊಂಡಿದೆ.